ರೇಷನ್ ಅಂಗಡಿಯಲ್ಲಿ ದಿನಸಿ ಸಾಮಗ್ರಿ ಕೊಳ್ಳಲು ಹೋದ ಜನರಿಗೆ ರಾಷ್ಟ್ರಧ್ವಜ ಕೊಂಡುಕೊಳ್ಳಲು ಒತ್ತಾಯಿಸಿದ ಸಿಬ್ಬಂದಿಯ ವಿಡಿಯೋವೊಂದು ವೈರಲ್ ಆಗಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡಿದ ಬಿಜೆಪಿ ಸಂಸದ ವರುಣ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದಾರೆ. 20 ರೂ.ಗೆ ತಿರಂಗ ಧ್ವಜವನ್ನು ಕೊಂಡುಕೊಳ್ಳಲು ಹಲವರಿಗೆ ಆ ಸಿಬ್ಬಂದಿ ಒತ್ತಾಯಿಸಿದ್ದಾರೆ ಎಂದು ವಿಡಿಯೋದಲ್ಲಿ ನೋಡಬಹುದು.
ಹಲವು ವಿಚಾರಗಳಲ್ಲಿ ಕೇಸರಿ ಪಕ್ಷದ ವಿರುದ್ಧವೇ ಹರಿಹಾಯುವ ಫಿಲಿಬಿಟ್‌ನ ಬಿಜೆಪಿ ಸಂಸದ ವರುಣ್ ಗಾಂಧಿ, ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೆ, ಸ್ವಾತಂತ್ರ್ಯದ 75ನೇ ವರ್ಷಾಚರಣೆ ಬಡವರಿಗೆ ಹೊರೆಯಾದರೆ ಅದು ದುರದೃಷ್ಟಕರ ಎಂಬ ಕ್ಯಾಪ್ಷನ್ ಅನ್ನು ಸಹ ಹಂಚಿಕೊಂಡಿದ್ದಾರೆ. ರೇಷನ್ ಕಾರ್ಡ್ ಹೊಂದಿದವರಿಗೆ ರಾಷ್ಟ್ರ ಧ್ವಜ ಕೊಂಡುಕೊಳ್ಳಲು ಒತ್ತಾಯಿಸಲಾಗುತ್ತಿದೆ. ಇಲ್ಲದಿದ್ದರೆ ಅವರಿಗೆ ನೀಡಬೇಕಾದ ಧಾನ್ಯಗಳನ್ನು ಕೊಡಲು ನಿರಾಕರಿಸಲಾಗುತ್ತಿದೆ. ಬಡವರ ತುತ್ತು ಅನ್ನ ಕಸಿದುಕೊಂಡು ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ನೆಲೆಯೂರಿರುವ ‘ತಿರಂಗ’ದ ಬೆಲೆ ಕೀಳುವುದು ನಾಚಿಕೆಗೇಡಿನ ಸಂಗತಿ ಎಂದೂ ವರುಣ್ ಗಾಂಧಿ ಕಿಡಿ ಕಾರಿದ್ದಾರೆ.
ಹರ್ಯಾಣದ ಕರ್ನಾಲ್‌ನಲ್ಲಿ ಈ ವಿಡಿಯೋವನ್ನು ಸುದ್ದಿ ಪೋರ್ಟಲ್‌ವೊಂದು ರೆಕಾರ್ಡ್ ಮಾಡಿದ್ದು, ಈ ವಿಡಿಯೋದಲ್ಲಿ ರೂ. 20 ಕೊಟ್ಟು ರಾಷ್ಟ್ರಧ್ವಜ ಕೊಂಡುಕೊಳ್ಳಲು ಒತ್ತಾಯಿಸಲಾಗುತ್ತಿದೆ ಎಂದು ಹಲವರು ಆರೋಪಿಸಿದ್ದಾರೆ. ರಾಜ್ಯ ಸರ್ಕಾರ ನಡೆಸುವ ರೇಷನ್ ಡಿಪೋವೊಂದರಲ್ಲಿ ಈ ರೀತಿ ಒತ್ತಾಯಿಸಲಾಗುತ್ತಿದೆ ಎಂದೂ ಹೇಳಲಾಗಿದೆ.
ರೇಷನ್ ಡಿಪೋದ ಸಿಬ್ಬಂದಿ ಎನ್ನಲಾದ ವ್ಯಕ್ತಿ, ರೇಷನ್ ಕೊಳ್ಳುವ ಪ್ರತಿ ವ್ಯಕ್ತಿ ಸಹ ರೂ. 20 ಕೊಟ್ಟು ತಿರಂಗ ಧ್ವಜ ಕೊಂಡುಕೊಳ್ಳಬೇಕೆಂದು ಹಾಗೂ ಅದನ್ನು ತಮ್ಮ ಮನೆಗಳಲ್ಲಿ ಹಾಕಿಕೊಳ್ಳಬೇಕೆಂದು ನಮಗೆ ಆದೇಶ ಬಂದಿದೆ ಎಂದು ಆ ವಿಡಿಯೋದಲ್ಲಿ ಹೇಳಿರುವುದನ್ನು ಕೇಳಬಹುದು. ಅಲ್ದೆ, ಧ್ವಜ ಕೊಂಡುಕೊಳ್ಳದಿದ್ದರೆ ಅಂತಹವರಿಗೆ ರೇಷನ್ ಕೊಡಬೇಡಿ ಎಂದು ನಮಗೆ ಹೇಳಲಾಗಿದೆ. ನಮಗೆ ಬಂದಿರುವ ಆದೇಶವನ್ನು ನಾವು ಪಾಲಿಸಬೇಕಿದೆ ಎಂದೂ ಆ ವ್ಯಕ್ತಿ ಹೇಳಿದ್ದಾರೆ.
आजादी की 75वीं वर्षगाँठ का उत्सव गरीबों पर ही बोझ बन जाए तो दुर्भाग्यपूर्ण होगा।
राशनकार्ड धारकों को या तिरंगा खरीदने पर मजबूर किया जा रहा है या उसके बदले उनके हिस्से का राशन काटा जा रहा है।
हर भारतीय के हृदय में बसने वाले तिरंगे की कीमत गरीब का निवाला छीन कर वसूलना शर्मनाक है। pic.twitter.com/pYKZCfGaCV
— Varun Gandhi (@varungandhi80) August 10, 2022