ಕಝನ್(ರಷ್ಯಾ): ಭಾರತದ ಬೆಂಬಲ ಮಾತುಕತೆ ಮತ್ತು ರಾಜತಾಂತ್ರಿಕತೆಗೆ ಹೊರತು ಯುದ್ಧಕಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಬ್ರಿಕ್ಸ್ ಸಮಾವೇಶದಲ್ಲಿ ಬುಧವಾರ ಪ್ರತಿಪಾದಿಸಿದ್ದಾರೆ.
ಇದರೊಂದಿಗೆ ರಷ್ಯಾ-ಉಕ್ರೇನ್ ಸಂಘರ್ಷವನ್ನು ಶಾಂತಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎನ್ನುವ ಕರೆ ನೀಡಿದ್ದಾರೆ.
ಜಗತ್ತನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯಲು ಬ್ರಿಕ್ಸ್ ಸಕಾರಾತ್ಮಕ ಪಾತ್ರವನ್ನು ವಹಿಸಬಹುದು ಎಂದ ಮೋದಿ, ಯುದ್ಧ, ಆರ್ಥಿಕ ಅನಿಶ್ಚಿತತೆ, ಹವಾಮಾನ ಬದಲಾವಣೆ ಹಾಗೂ ಸವಾಲುಗಳ ಬಗ್ಗೆ ಬ್ರಿಕ್ಸ್ ಸಮಾವೇಶದ ಭಾಷಣದಲ್ಲಿ ಶಾಂತಿ ಮಂತ್ರ ಪ್ರತಿಪಾದಿಸಿದ್ದಾರೆ.
ಭವಿಷ್ಯದ ಪೀಳಿಗೆಗೆ ಉತ್ತಮ ಅವಕಾಶಗಳನ್ನು ಒದಗಿಸಬೇಕಿದೆ. ಕೋವಿಡ್ ಮಾದರಿಯಲ್ಲಿ ಒಟ್ಟಾಗಿ ಹೋರಾಡಿ ಜಾಗತೀಕ ಸಮಸ್ಯೆಗಳಿಂದ ಪಾರಾಗಬೇಕಿದೆ ಎಂದಿದ್ದಾರೆ.
ಯುದ್ಧ ಕೊನೆಗಾಣಿಸುವಂತೆ ಪುಟಿನ್‌ಗೆ ಒತ್ತಾಯ
ಸಮಾವೇಶದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ ಮೋದಿ ಯುದ್ಧ ಕೊನೆಗಾಣಿಸುವಂತೆ ಪರೋಕ್ಷವಾಗಿ ಒತ್ತಡ ಹೇರಿದರು.
ರಷ್ಯ ಮತ್ತು ಉಕ್ರೇನ್‌ನಲ್ಲಿ ಶಾಂತಿ, ಸ್ಥಿರತೆ ಕಾಪಾಡಲು ಭಾರತ ಎಲ್ಲ ರೀತಿಯಿಂದಲೂ ಬೆಂಬಲ ನೀಡುತ್ತದೆ. ಸಂಘರ್ಷಪೀಡಿತ ಉಭಯ ದೇಶಗಳ ಮುಖ್ಯಸ್ಥರ ಜತೆ ಭಾರತ ನಿರಂತರವಾಗಿ ಸಂಪರ್ಕದಲ್ಲಿದೆ. ಯುದ್ಧದಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಪರಸ್ಪರ ಶಾಂತಿ ಸಂಧಾನದ ಮೂಲಕ ಸಂಘರ್ಷ ಪರಿಹರಿಸಿಕೊಳ್ಳುವ ಅಗತ್ಯವಿದೆ. ಇದಕ್ಕೆ ಭಾರತ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧವಿದೆ ಎಂದು ಹೇಳಿದರು.