ಕೋಲ್ಕತ್ತಾ: ಆರ್‌ಜಿಕರ್ ತೀರ್ಪು ನನಗೆ ತೃಪ್ತಿ ತಂದಿಲ್ಲ. ಕೋಲ್ಕತ್ತಾ ಪೊಲೀಸರೇ ತನಿಖೆ ಮಾಡಿದ್ದರೆ ಗಲ್ಲು ಶಿಕ್ಷೆ ಖಚಿತವಾಗುತ್ತಿತ್ತು ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅಸಮಾಧಾನ ಹೊರಹಾಕಿದ್ದಾರೆ.
ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಪ್ರಕರಣದ ಏಕೈಕ ಅಪರಾಧಿಗೆ ನ್ಯಾಯಾಲಯ ಇಂದು ಜೀವಾವಧಿ ಶಿಕ್ಷೆ ವಿಧಿಸಿದೆ.
ಈ ಬಗ್ಗೆ ಮಾತನಾಡಿದ ಸಿಎಂ ಮಮತಾ ಬ್ಯಾನರ್ಜಿ ಅವರು, ಪ್ರಕರಣದಲ್ಲಿ ಸಿಬಿಐ ತನಿಖೆಯನ್ನೇ ಪ್ರಶ್ನೆ ಮಾಡಿದ್ದಾರೆ.
ನಾವೆಲ್ಲರೂ ಅಪರಾಧಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದ್ದೆವು. ಆದರೆ ಜೀವಾವಧಿ ಶಿಕ್ಷೆ ನೀಡಿದೆ. ಪ್ರಕರಣವನ್ನು ನಮ್ಮಿಂದ ಬಲವಂತವಾಗಿ ಕಸಿದುಕೊಳ್ಳಲಾಯಿತು. ನನಗೆ ಈ ತೀರ್ಪು ತೃಪ್ತಿ ತಂದಿಲ್ಲ ಎಂದರು.
ಇನ್ನು ತೀರ್ಪಿನ ಬಗ್ಗೆ ಸಂತ್ರಸ್ತೆಯ ಪೋಷಕರು ಸಹ ಬೇಸರ ವ್ಯಕ್ತಪಡಿಸಿದ್ದು, ನ್ಯಾಯಾಲಯದ ಆದೇಶವು ಸಮಾಧಾನ ತಂದಿಲ್ಲ ಎಂದಿದ್ದಾರೆ.
ಮತ್ತೊಮ್ಮೆ ನ್ಯಾಯ ಕೋರಿ ಉನ್ನತ ನ್ಯಾಯಾಲಯದ ಮೆಟ್ಟಿಲೇರುವುದಾಗಿ ತಿಳಿಸಿದ್ದು, ಈ ಕೃತ್ಯದ ಹಿಂದೆ ದೊಡ್ಡ ಪಿತೂರಿಯಿದೆ ಎಂದು ಕಿಡಿಕಾರಿದ್ದಾರೆ.