Mysore
16
scattered clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಹೆಲಿಕಾಪ್ಟರ್‌ ಪತನ: ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಸಾವು

ಟೆಹ್ರಾನ್:‌ ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಭಾನುವಾರ(ಮೇ.19) ಪತನಗೊಂಡಿದೆ. ಇಬ್ರಾಹಿಂ ರೈಸಿ ಸೇರಿದಂತೆ ಜೊತೆಯಲ್ಲಿ ಪ್ರಯಾಣಿಸುತ್ತಿದ್ದ ಎಲ್ಲರೂ ಮೃತಪಟ್ಟಿರುವುದಾಗಿ ರಾಯಿಟರ್ಸ್‌ ವರದಿ ಮಾಡಿದೆ.

ವಿದೇಶಾಂಗ ಸಚಿವ ಹುಸೇನ್ ಅಮೀರ್ ಅಬ್ದುಲ್ಲಾಹಿಯಾನ್, ಪೂರ್ವ ಅಜೆರ್ಬೈಜಾನ್ ಪ್ರಾಂತ್ಯದ ಗವರ್ನರ್ ಮಾಲೆಕ್ ರಹಮತಿ, ತಬ್ರಿಜ್‌ನ ಇಮಾಮ್ ಮೊಹಮ್ಮದ್ ಅಲಿ ಅಲೆಹಶೆಮ್, ಪೈಲಟ್, ಕೋ ಪೈಲಟ್, ಸಿಬ್ಬಂದಿ ಮುಖ್ಯಸ್ಥ, ಭದ್ರತಾ ಮುಖ್ಯಸ್ಥ ಹಾಗೂ ಗನ್‌ಮ್ಯಾನ್‌ಗಳು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಇಬ್ರಹಿಂ ರೈಸಿ ಅವರಿದ್ದ ಹೆಲಿಕಾಪ್ಟರ್‌ ಅಜೆರ್‌ ಪ್ರಾಂತ್ಯದ ಗಡಿಯ ಗುಡ್ಡಪ್ರದೇಶಗಳ ವ್ಯಾಪ್ತಿಯಲ್ಲಿ ಪತನಗೊಂಡಿದೆ. ಈ ಅಪಘಾತಕ್ಕೂ ಮುನ್ನ ಹೆಲಿಕಾಪ್ಟರ್‌ ನಿಯಂತ್ರಣ ಘಟಕದ ಸಂಪರ್ಕ ಕಡಿದುಕೊಂಡು ವೇಗವಾಗಿ ಭೂಸ್ಪರ್ಶ ಮಾಡಿದೆ ಎಂದು ಇರಾನ್‌ ಮಾಧ್ಯಮಗಳು ವರದಿ ಮಾಡಿವೆ.

ಹೆಲಿಕಾಪ್ಟರ್‌ ಪತನಗೊಂಡ ಪ್ರದೇಶಗಳಲ್ಲಿ ದಟ್ಟನೆಯ ಮಂಜು ಮಸುಕಿದ್ದು, ಶೋಧ ಹಾಗೂ ರಕ್ಷಣಾ ತಂಡಗಳು ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದಾವೆ.

ಅಣೆಕಟ್ಟು ಉದ್ಘಾಟನೆಗೆ ಆಗಮಿಸಿದ್ದ ರೈಸಿ:
ಅಜೆರ್‌ಬೈಜ್‌ನಲ್ಲಿ ಅರಾಸ್‌ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಅಣೆಕಟ್ಟು ಉದ್ಘಾಟನೆಗಾಗಿ ರೈಸಿ ಬಂದಿದ್ದರು. ಈ ಕಾರ್ಯಕ್ರಮದಲ್ಲಿ ಅಜೆರ್‌ಬೈಜಾನ್‌ ಅಧ್ಯಕ್ಷ ಇಲ್ಹಾಮ್‌ ಅಲಿಯೆವ್‌ ಸಹ ಇದ್ದರು. ರೈಸಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಜೊತೆಗೆ ಬೆಂಗಾವಲಿನ ಎರಡು ಹೆಲಿಕಾಪ್ಟರ್‌ ಹಾರಾಟ ನಡೆಸಿದ್ದವು. ಅವು ಸುರಕ್ಷಿತವಾಗಿ ನಿಗದಿತ ಸ್ಥಳ ತಲುಪಿವೆ ಎನ್ನಲಾಗಿದೆ.

ಡ್ರೋನ್‌ ಮೂಲಕ ಕಾರ್ಯಾಚರಣೆ:
ಪತನಗೊಂಡ ಹೆಲಿಕಾಪ್ಟರ್‌ನ್ನು ಟರ್ಕಿಯ ಡ್ರೋನ್‌ ಪತ್ತೆ ಮಾಡಿದ್ದು, ಇರಾನ್‌ ರಕ್ಷಣಾ ಕಾರ್ಯಾಚರಣೆಯ ತಂಡಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಹೆಲಿಕಾಪ್ಟರ್‌ ಪತನದ ಪ್ರದೇಶದಲ್ಲಿ ದಟ್ಟ ಮಂಜು ಆವರಿಸಿದ್ದು, ಶಾಖವಿರುವ ಪ್ರದೇಶವನ್ನು ಡ್ರೋನ್‌ ಮತ್ತೆ ಹಚ್ಚಿದೆ. ಅದುವೇ ಹೆಲಿಕಾಪ್ಟರ್‌ ಪತನದ ಜಾಗವಿರಬಹುದು ಎಂದು ನಂಬಲಾಗಿದೆ.

ಹೆಲಿಕಾಪ್ಟರ್‌ ಪತ್ತೆಗೆ ಟರ್ಕಿಯ ನೈಟ್‌ ವಿಷನ್‌ ಹೆಲಿಕಾಪ್ಟರ್‌ಗಳನ್ನು ಕಳುಹಿಸಲು ಇರಾನ್‌ ಮನವಿ ಮಾಡಿತ್ತು. ಅದರಂತೆ 6 ನೈಟ್‌ ವಿಷನ್‌ ಮತ್ತು ಶೋಧ ಕಾರ್ಯಾಚರಣೆಯ ಹೆಲಿಕಾಪ್ಟರ್‌ಗಳು ಮತ್ತು 32 ಮಂದಿ ಪರ್ವತಾರೋಹಿಗಳನ್ನು ಕಳುಹಿಸಲಾಗಿದೆ ಎಂದು ಟರ್ಕಿಯ ವಿಪತ್ತು ಮತ್ತು ತುರ್ತು ನಿರ್ವಹಣಾ ಸಚಿವಾಲಯ ತಿಳಿಸಿದೆ.

Tags:
error: Content is protected !!