Mysore
25
haze

Social Media

ಶನಿವಾರ, 13 ಡಿಸೆಂಬರ್ 2025
Light
Dark

ಭಾರತದ ಆರ್ಥಿಕತೆ ಸತ್ತಿದೆ ಎಂದ ಡೋನಾಲ್ಡ್ ಟ್ರಂಪ್‌ ಹೇಳಿಕೆಗೆ ಹೆಚ್.ಡಿ. ದೇವೇಗೌಡ ತೀವ್ರ ಆಕ್ಷೇಪ

H.D. Deve Gowda Strongly Objects to Donald Trump’s Statement Claiming ‘India’s Economy is Dead’

ಬೆಂಗಳೂರು : ಭಾರತದ ಆರ್ಥಿಕತೆ ಸತ್ತಿದೆ ಎಂದಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಅವರ ಹೇಳಿಕೆ ಬಗ್ಗೆ ತೀವ್ರ ಅಚ್ಚರಿ ವ್ಯಕ್ತಪಡಿಸಿರುವ ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ ಅವರು ಬಹುಶಃ ಟ್ರಂಪ್‌ ಕುರುಡರಾಗಿರಬೇಕು ಅಥವಾ ಅಜ್ಞಾನಿ ಆಗಿರಬೇಕು ಎಂದು ಟೀಕಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಮಾಜಿ ಪ್ರಧಾನಮಂತ್ರಿಗಳು, ಟ್ರಂಪ್‌ ಅವರ ವರ್ತನೆ, ಭಾಷೆ ಅವರ ಹೇಳಿಕೆಯ ಇನ್ನಿತರ ಅಂಶಗಳ ಬಗ್ಗೆ ಅತೀವ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಒಬ್ಬ ಸಣ್ಣ ವ್ಯಾಪಾರಿ ಮತ್ತು ಬಡರೈತ ಕೂಡ ತನ್ನ ವ್ಯವಹಾರವನ್ನು ಬಹಳ ಘನತೆ, ಸಮಗ್ರತೆ ಮತ್ತು ಮಾನವೀಯತೆಯಿಂದ ನಡೆಸುತ್ತಿದ್ದಾನೆ. ಈ ಮೂಲಕ ಟ್ರಂಪ್‌ ಅವರಿಗೆ ಅನೇಕ ಪಾಠಗಳನ್ನು ಕಲಿಸಬಹುದು. ಎಲ್ಲರಂತೆ ನಾನು ಕೂಡ ಭಾರತದ ಆರ್ಥಿಕತೆಯ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಧಾರ ರಹಿತ ಮತ್ತು ಕೋಪದ ಹೇಳಿಕೆಗಳಿಂದ ಆಶ್ಚರ್ಯಚಕಿತನಾಗಿದ್ದೇನೆ. ಆಧುನಿಕ ಇತಿಹಾಸದಲ್ಲಿ ಇಷ್ಟೊಂದು ಅಸ್ಥಿರ, ಅನಾಗರಿಕ ಮತ್ತು ಬೇಜವಾಬ್ದಾರಿಯುತ ರಾಷ್ಟ್ರಮುಖ್ಯಸ್ಥರನ್ನು ನಾನು ಕಂಡಿಲ್ಲ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಟ್ರಂಪ್ ಅವರು ಭಾರತದೊಂದಿಗೆ ಮಾತ್ರವಲ್ಲ, ಜಗತ್ತಿನಾದ್ಯಂತ ಪ್ರತೀ ದೇಶದೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ. ಅವರು ತಮ್ಮ ದೀರ್ಘಕಾಲದ ಮಿತ್ರರಾಷ್ಟ್ರಗಳನ್ನು ಸಹ ಬಿಟ್ಟಿಲ್ಲ. ಅವರಲ್ಲಿ ಮೂಲಭೂತವಾಗಿ ಏನೋ ಸಮಸ್ಯೆ ಇದೆ. ರಾಜತಾಂತ್ರಿಕತೆ ಅಥವಾ ರಾಜಕೀಯದ ಮೂಲಕ ಅದನ್ನು ಪತ್ತೆ ಹಚ್ಚಲು ಅಥವಾ ಪರಿಹರಿಸಲು ಸಾಧ್ಯವಿಲ್ಲ. ಅವರ ಕೋಪದ ಸ್ವಭಾವದ ಬಗ್ಗೆ ಇದಕ್ಕಿಂತ ಹೆಚ್ಚಿಗೆ ಹೇಳುವುದು ಸರಿಯಲ್ಲ. ಏಕೆಂದರೆ, ಅದು ನಮ್ಮ ತತ್ವಾದರ್ಶಗಳಿಗೆ, ಬದ್ಧತೆ ಕಡಿಮೆ ಎನಿಸುತ್ತದೆ. ಭಾರತದ ಸಣ್ಣ ವ್ಯಾಪಾರಿ ಮತ್ತು ಬಡರೈತ ಕೂಡ ತಮ್ಮ ವ್ಯವಹಾರವನ್ನು ಬಹಳ ಘನತೆ, ಸಮಗ್ರತೆ ಮತ್ತು ಮಾನವೀಯತೆಯಿಂದ ನಡೆಸುತ್ತಾ ಟ್ರಂಪ್‌ಗೆ ಅನೇಕ ಪಾಠಗಳನ್ನು ಕಲಿಸಬಹುದು ಎಂದು ನಾನು ಬಲವಾಗಿ ನಂಬಿದ್ದೇನೆ ಎಂದು ಪ್ರತಿಪಾದಿಸಿದರು.

ಭಾರತವು ವೈವಿಧ್ಯಮಯ ಮತ್ತು ಪ್ರಜಾಪ್ರಭುತ್ವವಾದಿ ಸಾರ್ವಭೌಮ ರಾಷ್ಟ್ರ. ಸ್ವಾತಂತ್ರ್ಯದ ನಂತರ ಅದು ಯಾವಾಗಲೂ ಅತ್ಯುನ್ನತ ರಾಷ್ಟ್ರೀಯ ಹಿತಾಸಕ್ತಿಗಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಭಾರತವು ತನ್ನ ದಾರಿಗೆ ಎದುರಾಗುವ ಎಲ್ಲಾ ತೊಂದರೆಗಳನ್ನು ಮಾತುಕತೆ ಮೂಲಕವೇ ಪರಿಹರಿಸಿಕೊಂಡು ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಲು ದೇವರು ಕರುಣಿಸಿರುವ ಸಾಮರ್ಥ್ಯ ಮತ್ತು ಶಕ್ತಿಯನ್ನು ಹೊಂದಿದೆ ಎಂಬುದು ನನ್ನ ಭಾವನೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವು ನಮ್ಮ ರಾಷ್ಟ್ರೀಯ ಹಿತಾಸಕ್ತಿಯನ್ನು ರಾಜಿ ಮಾಡಿಕೊಂಡಿಲ್ಲ ಎಂಬ ಬಗ್ಗೆ ನನಗೆ ಅತೀವ ಸಂತೋಷ ಮತ್ತು ಹೆಮ್ಮೆ ಇದೆ. ಟ್ರಂಪ್ ಅವರ ಬೆದರಿಕೆಗೆ ಭಾರತ ಹೆದರುವುದಿಲ್ಲ ಮತ್ತು ಅಂಥ ಬೆದರಿಕೆಗಳಿಂದ ಭಾರತ ಎಂದಿಗೂ ಇನ್ನೊಬ್ಬರ ತಾಳಕ್ಕೆ ತಕ್ಕಂತೆ ನಡೆಯುವುದಿಲ್ಲ ಎಂದು ಈಗಾಗಲೇ ತೋರಿಸಿಕೊಟ್ಟಿದೆ ಎಂದು ಹೇಳಿದರು.

ಇದಕ್ಕೆ ವಿರುದ್ಧವಾಗಿ ರಾಷ್ಟ್ರದ ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆ ಅವಲಂಬಿಸಿರುವ ಕೃಷಿ ವಲಯ ಮತ್ತು ಸಣ್ಣ ಮತ್ತು ಮಧ್ಯಮ ವ್ಯವಹಾರಗಳನ್ನು ಸಂರಕ್ಷಿಸಲು ಮೋದಿ ಅವರ ಸರಕಾರವು ಪರಿಪೂರ್ಣ ಪ್ರಯತ್ನ ಮಾಡಿದೆ. ಸರಕಾರ ಕೈಕೊಂಡ ದೃಢ ನಿಲುವು ಅಭೂತಪೂರ್ವ ರಾಷ್ಟ್ರೀಯ ಅಭಿವೃದ್ಧಿಯ ಪುನರುಜ್ಜೀವನಕ್ಕೆ ಕಾರಣವಾಗಿದೆ.

ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಮತ್ತು ಜಗತ್ತಿನ ಐದನೇ ಅತೀದೊಡ್ಡ ಆರ್ಥಿಕತೆ ಆಗಿದೆ. ನಮ್ಮ ಆರ್ಥಿಕತೆಯನ್ನು ‘ಸತ್ತಿದೆ’ ಎಂದು ಹೇಳಲು ಟ್ರಂಪ್ ಅವರು ಕುರುಡರಾಗಿರಬೇಕು ಇಲ್ಲವೇ ಅಜ್ಞಾನಿಗಳಾಗಿರಬೇಕು. ಅವರ ಹೇಳಿಕೆಗಳನ್ನು ಆನಂದಿಸಿ ಭಾರತದಲ್ಲಿ ಅವರ ಭ್ರಮೆಯ ವಕ್ತಾರರಾಗಲು ಹೊರಟಿರುವ ವಿರೋಧ ಪಕ್ಷದ ಕೆಲ ನಾಯಕರಿಗೆ ಎಚ್ಚರಿಕೆಯ ಮಾತು ಹೇಳ ಬಯಸುತ್ತೇನೆ. ಅವರ ಹತಾಶೆಯನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಆದರೆ, ಅವರು ತಮ್ಮನ್ನು ಮತ್ತು ತಮ್ಮ ಪಕ್ಷಗಳಿಗೆ ಹಾನಿ ಮಾಡಿಕೊಳ್ಳಬಾರದು ಮತ್ತು ಟ್ರಂಪ್ ಅವರೊಂದಿಗೆ ಇತಿಹಾಸದ ಕಸದಬುಟ್ಟಿಗೆ ಬಹುಬೇಗನೆ ಸೇರಬಾರದು ಎಂದು ಅಭಿಪ್ರಾಯಿಸಿದ್ದಾರೆ.

Tags:
error: Content is protected !!