ಬೆಳಗಾವಿ: ಪ್ರಯಾಗ್‌ರಾಜ್‌ನ ಮಹಾಕುಂಭ ಮೇಳದಲ್ಲಿ ಸಾರ್ವಜನಿಕರ ನೂಕು ನುಗ್ಗಲಿನಿಂದ ಕಾಲ್ತುಳಿತಕ್ಕೆ ಸಿಲುಕಿದ ಬೆಳಗಾವಿಯ ನಾಲ್ವರು ಕನ್ನಡಿಗರು ಸಾವನ್ನಪ್ಪಿದ್ದಾರೆ.
ನಗರದ ವಡಗಾವಿಯ ನಿವಾಸಿ ಜ್ಯೋತಿ ಹತ್ತರವಾಠ (50) ಮತ್ತು ಪುತ್ರಿ ಮೇಘಾ ಹತ್ತರವಾಠ (18), ಶೆಟ್ಟಿಗಲ್ಲಿಯ ಅರುಣ ಕೋರ್ಪಡೆ ಹಾಗೂ ಶಿವಾಜಿನಗರದ ನಿವಾಸಿ ಮಹಾದೇವಿ ಮೃತರಾಗಿದ್ದಾರೆ.
ಇಂದು (ಜ.29) ಬೆಳಿಗ್ಗೆ ಕಾಲ್ತುಳಿತಕ್ಕೆ ಸಿಕ್ಕಿ ಗಾಯಗೊಂಡಿದ್ದ ನಾಲ್ವರನ್ನು ಪ್ರಯಾಗ್‌ರಾಜ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಅಲ್ಲಿನ ವೈದ್ಯಕೀಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಬೆಳಗಾವಿಯ ನಾಲ್ವರು ಸಾವನ್ನಪ್ಪಿದ ಮಾಹಿತಿ ಖಚಿತವಾಗಿದ್ದು, ಅವರ ಶವಗಳನ್ನು ತವರೂರಿಗೆ ತರಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.