315 ಕೋಟಿ ಸೈಬರ್ ವಂಚನೆ ಪ್ರಕರಣದಲ್ಲಿ ಬಂಧನ
ಕೋಲ್ಕತ್ತಾ : ಶೆಲ್ ಕಂಪನಿಗಳು ಮತ್ತು ಕ್ರಿಪ್ಟೋಕರೆನ್ಸಿ ಆಧಾರಿತ ಹಣ ವರ್ಗಾವಣೆಯ ಬಹುಕೋಟಿ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಕೈಗಾರಿಕೋದ್ಯಮಿ ಪವನ್ ಕುಮಾರ್ ರುಹಿಯಾ(ರುಹಿಯಾ ಗ್ರೂಪ್ ಅಧ್ಯಕ್ಷ) ಅವರನ್ನು ಪಶ್ಚಿಮ ಬಂಗಾಳ ಪೊಲೀಸ್ ಸೈಬರ್ ಅಪರಾಧ ವಿಭಾಗ ಮಂಗಳವಾರ ಬಂಧಿಸಿದೆ.
ಮೈಸೂರಿನ ಫಾಲ್ಕನ್ ಟೈರ್ಸ್ ಲಿ. ನ ಮಾಜಿ ಮಾಲೀಕರೂ ಆದ ರುಹಿಯಾ ಅವರನ್ನು 315 ಕೋಟಿ ರೂಪಾಯಿ ಮೌಲ್ಯದ ಅಂತರರಾಜ್ಯ ಸೈಬರ್ ವಂಚನೆ ಪ್ರಕರಣದಲ್ಲಿ ಆರೋಪಿ ಎಂದು ಗುರುತಿಸಲಾಗಿದೆ.
ಶೆಲ್ ಕಂಪನಿಗಳು, ಕ್ರಿಪ್ಟೋಕರೆನ್ಸಿ ಹಣ ವರ್ಗಾವಣೆ ಮತ್ತು ನಕಲಿ ಹೂಡಿಕೆ ಅಪ್ಲಿಕೇಶನ್‌ಗಳ ಮೂಲಕ ಹಿರಿಯ ನಾಗರಿಕರನ್ನು ವಂಚಿಸಿದ ದೊಡ್ಡ ಜಾಲದಲ್ಲಿ ರುಹಿಯಾ ಕುಟುಂಬದ ಬ್ಯಾಂಕ್ ಖಾತೆಗಳಿಗೆ ಹಣ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಧಾನ್‌ನಗರ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ದೇಶಾದ್ಯಂತ 1,379 ದೂರುಗಳು ಸಂಬಂಧಿಸಿವೆ. ಕಲ್ಕತ್ತಾ ಹೈಕೋರ್ಟ್‌ನಿಂದ ಮಧ್ಯಂತರ ರಕ್ಷಣೆ ರದ್ದುಗೊಂಡ ನಂತರ ಬಂಧನವಾಗಿದೆ.
ಇದು ರುಹಿಯಾ ಅವರಿಗೆ ಎರಡನೇ ಬಾರಿ ಬಂಧನವಾಗಿದೆ. 2016ರಲ್ಲಿ ರೈಲ್ವೇ ಸಂಬಂಧಿತ ಕಳ್ಳತನ ಆರೋಪದಲ್ಲಿ ಅವರು ಬಂಧಿತರಾಗಿದ್ದರು.
ಕೊಲ್ಕತ್ತಾದಲ್ಲಿ ಅವರನ್ನು ಸೈಬರ್ ಕ್ರೈಂ ವಿಚಾರವಾಗಿ ಬಂಧಿಸಲಾಗಿದ್ದು, ಮೈಸೂರಿನಲ್ಲಿ ಫ್ಯಾಕ್ಟರಿ ಮೇಲೆ ಅಥವಾ ಬೇರೆ ಯಾವುದೇ ವಿಷಯವಾಗಿ ಪ್ರಕರಣ ದಾಖಲಾಗಿಲ್ಲ ಎಂದು ಮೈಸೂರಿನ ಪೊಲೀಸರು ತಿಳಿಸಿದ್ದಾರೆ.





