ಶೇಷಾದ್ರಿ ಗಂಜೂರು: ಮಾಧ್ಯಮ ತಜ್ಞರು
ಟೆಹರಾನ್: ಮಧ್ಯಪ್ರಾಚ್ಯದ ಸಂಘರ್ಷಗಳ ಸಮಯದಲ್ಲಿ ಜಾಗತಿಕ ತೈಲ ಬೆಲೆ ಗಗನಕ್ಕೇರುವುದು, ಇದರಿಂದ ಸಾರಿಗೆ ವೆಚ್ಚ ಹೆಚ್ಚಾಗಿ ತರಕಾರಿಯಿಂದ ದಿನಸಿಯವರೆಗೆ ನಮ್ಮ ದಿನನಿತ್ಯದ ಪ್ರತಿಯೊಂದು ವಸ್ತುವೂ ದುಬಾರಿಯಾಗುವುದು ಸತ್ಯವಾದರೂ ಹಳೆಯ ವಿಷಯ. ಆದರೆ ಇದು ಕೇವಲ ಆರಂಭವಷ್ಟೇ.
ಪೆಟ್ರೋಲಿಯಂನ ಉಪ ಉತ್ಪನ್ನಗಳಾದ ಪ್ಲಾಸ್ಟಿಕ್ ಮತ್ತು ರಾಸಾಯನಿಕ ಗೊಬ್ಬರಗಳ ಬೆಲೆ ಈಗ ಏರತೊಡಗಿದೆ. ಗೊಬ್ಬರದ ಬೆಲೆ ಹೆಚ್ಚಾದರೆ ರೈತರ ಮೇಲಿನ ಹೊರೆ ಹೆಚ್ಚಾಗಿ ಆಹಾರ ಧಾನ್ಯಗಳ ಬೆಲೆ ಮತ್ತಷ್ಟು ಏರುತ್ತದೆ.
ಆದರೆ ಇಂದಿನ globalized ಯುಗದಲ್ಲಿ ಜಾಗತಿಕ ಮಾರುಕಟ್ಟೆಯ ಕೊಂಡಿ ಬಹಳ ಸಂಕೀರ್ಣವಾದದ್ದು. ಅಮೆರಿಕ ಇರಾನಿನ ಮೇಲೆ ಬಾಂಬ್ ಹಾಕಿದರೆ ಸಕ್ಕರೆ ಬೆಲೆ ಮೇಲೇರುವುದು ಅಚ್ಚರಿ ಎನ್ನಿಸಬಹುದು. ಆದರೆ, ಅಂತಹ ಲಕ್ಷಣಗಳು ಈಗಾಗಲೇ ಕಾಣುತ್ತಿವೆ. ವಿಶ್ವದ ಅತಿ ದೊಡ್ಡ ಸಕ್ಕರೆ ಉತ್ಪಾದಕ ದೇಶ ಬ್ರೆಜಿಲ್, ತೈಲ ಬೆಲೆ ಏರುತ್ತಿರುವುದರಿಂದ, ತನ್ನ ಕಬ್ಬಿನ ಬೆಳೆ ಕಠಾವಿಗೆ ಬಂದಾಗ ಅದನ್ನು ಸಕ್ಕರೆಯ ಬದಲು ಎಥೆನಾಲ್ ತಯಾರಿಸಲು ಮುಂದಾಗುತ್ತಿದೆಯಂತೆ. ಇದರಿಂದ ಮಾರುಕಟ್ಟೆಯಲ್ಲಿ ಸಕ್ಕರೆಯ ಕೊರತೆ ಉಂಟಾಗಿ ಬೆಲೆ ಏರುವ ಎಲ್ಲಾ ಸಾಧ್ಯತೆಗಳೂ ಇವೆ.
ಹತ್ತು ಸಾವಿರ ಕಿಲೋಮೀಟರ್ ದೂರದ ದೇಶವೊಂದು 3000 ಕಿಮೀ ದೂರದ ಇನ್ನೊಂದು ದೇಶದ ಮೇಲೆ ದಾಳಿ ಮಾಡಿದರೆ 15000 ಕಿಮೀ ದೂರದ ದೇಶದ ಕಾರಣದಿಂದಾಗಿ ಪರಿಣಾಮ ಬೀರುವುದು ಹತ್ತು ಹೆಜ್ಜೆಯೂ ದೂರವಿಲ್ಲದ ನಮ್ಮ ಅಡುಗೆ ಮನೆಯ ಮೇಲೆಯೇ.





