ಚೆನ್ನೈ: ನಿಮ್ಮ ಹಿಂದಿ ಭಾಷೆಯನ್ನು ನಮ್ಮ ಮೇಲೆ ಹೇರಬೇಡಿ ಎಂದು ಹೇಳುವ ಮೂಲಕ ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಹೇಳಿಕೆಗೆ ನಟ ಪ್ರಕಾಶ್ ರಾಜ್ ಟಾಂಗ್ ನೀಡಿದ್ದಾರೆ.
ಇಂದು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ನಿಮ್ಮ ಹಿಂದಿ ಭಾಷೆಯನ್ನು ನಮ್ಮ ಮೇಲೆ ಹೇರಬೇಡಿ. ಹಿಂದಿ ಭಾಷೆಯನ್ನು ದ್ವೇಷಿಸುವ ಉದ್ದೇಶದಿಂದ ನಾನು ಈ ರೀತಿ ಹೇಳುತ್ತಿಲ್ಲ. ನಮ್ಮ ಸಾಂಸ್ಕೃತಿಕ ಭಾಷೆ ಮತ್ತು ಸ್ವಾಭಿಮಾನ ಉಳಿಸುವ ಉದ್ದೇಶದಿಂದ ಈ ರೀತಿ ಹೇಳುತ್ತಿದ್ದೇನೆ. ಈ ವಿಚಾರವನ್ನು ದಯವಿಟ್ಟು ಪವನ್ ಕಲ್ಯಾಣ್ ಅವರಿಗೆ ಮನದಟ್ಟಾಗುವಂತೆ ತಿಳಿಸಿ ಎಂದು ಬರೆದುಕೊಂಡಿದ್ದಾರೆ.
ಈ ಹಿಂದೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಕೇಂದ್ರ ಸರ್ಕಾರ ಎನ್‌ಇಪಿಯಲ್ಲಿ ರೂಪಿಸಲಾದ ತ್ರಿವಳಿ ಭಾಷೆಯನ್ನು ರಾಜ್ಯಗಳಿಗೆ ಏರುತ್ತಿದೆ ಎಂದು ಆರೋಪಿಸಿದ್ದರು.
ಇದಕ್ಕೆ ತಿರುಗೇಟು ನೀಡಿದ ಪವನ್ ಕಲ್ಯಾಣ್, ಇತ್ತೀಚಿಗೆ ಕಾಕಿನಾಡದ ಪಿತಾಂಪುರದಲ್ಲಿ ನಡೆದ ಜನ ಸೇವಾ ಪಕ್ಷದ 12ನೇ ಸಂಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ ರಾಜ್ಯದಲ್ಲಿ ಹಿಂದಿ ಹೇರಿಕೆಗೆ ಸಂಬಂಧಿಸಿದಂತೆ ತಮಿಳುನಾಡು ರಾಜಕಾರಣಿಗಳದ್ದು ಬೂಟಾಟಿಕೆ ಎಂದು ಕರೆದಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಪ್ರಕಾಶ್ ರಾಜ್ ತಿರುಗೇಟು ನೀಡಿದ್ದಾರೆ.





