Mysore
27
overcast clouds

Social Media

ಬುಧವಾರ, 07 ಜನವರಿ 2026
Light
Dark

ದಿಲ್ಲಿ ಗಲಭೆ ಪ್ರಕರಣ | ಉಮರ್‌ ಖಾಲಿದ್‌, ಶಾರ್ಜೀಲ್‌ ಇಮಾನ್‌ ಜಾಮೀನಿಗೆ ಸುಪ್ರೀಂ ನಕಾರ

ಹೊಸದಿಲ್ಲಿ : 2020ರ ದೆಹಲಿ ಗಲಭೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಜೆಎನ್‍ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನಿರಾಕರಿಸಿದೆ.

ದಿಲ್ಲಿಯ ಗಲಭೆಯ ಇತರ ಆರೋಪಿಗಳ ವಿಚಾರಣೆ ಇನ್ನೂ ನಡೆಯುತ್ತಿದೆ. ದಿಲ್ಲಿ ಗಲಭೆಯ ಏಳು ಆರೋಪಿಗಳಾದ ಗುಲ್ಫಿಶಾ ಫಾತಿಮಾ, ಶಾರ್ಜೀಲ್ ಇಮಾಮ್, ಮೀರನ್ ಹೈದರ್, ಉಮರ್ ಖಾಲಿದ್, ಶಿಫಾ-ಉರ್-ರೆಹಮಾನ್, ಮೊಹಮ್ಮದ್ ಶಕೀಲ್ ಖಾನ್ ಮತ್ತು ಶಾದಾಬ್ ಅಹ್ಮದ್ ಅವರು ಸುಪ್ರೀಂ ಕೋರ್ಟ್‍ನಿಂದ ಜಾಮೀನು ಕೋರಿದ್ದರು. ಆದರೆ, ನ್ಯಾಯಾಲಯವು ಇಬ್ಬರು ಆರೋಪಿಗಳಿಗೆ ಜಾಮೀನು ನಿರಾಕರಿಸಿದೆ. ಇನ್ನು ಐದು ಜನರಿಗೆ ಷರತ್ತು ಬದ್ದ ಜಾಮೀನು ನೀಡಿದೆ.

ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠ ಈ ಮಹತ್ವದ ತೀರ್ಪು ಪ್ರಕಟಿಸಿದ್ದು, ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರ ಪಾತ್ರಗಳು ಇತರ ಆರೋಪಿಗಳಿಗಿಂತ ಭಿನ್ನವಾಗಿವೆ ಎಂದು ಸ್ಪಷ್ಟವಾಗಿ ಹೇಳಿದೆ. ಪ್ರಕರಣದಲ್ಲಿನ ಪ್ರಾಥಮಿಕ ಸಾಕ್ಷ್ಯಗಳು ಈ ಇಬ್ಬರು ಗಲಭೆ ರೂಪಿಸಲು ಯೋಜನೆ ಮತ್ತು ಕಾರ್ಯತಂತ್ರ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬುದನ್ನು ಸೂಚಿಸುತ್ತವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಪಾತ್ರಗಳು ಇತರರಿಗಿಂತ ಭಿನ್ನವಾಗಿವೆ. ಎಲ್ಲಾ ಆರೋಪಿಗಳ ಪಾತ್ರಗಳು ಒಂದೇ ಆಗಿಲ್ಲ ಎಂದು ದಾಖಲೆ ತೋರಿಸುತ್ತದೆ. ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪಗಳು ಬಲವಾಗಿವೆಯೇ ಎಂದು ನಾವು ಪರಿಶೀಲಿಸಬೇಕು. ಎಲ್ಲಾ ಆರೋಪಿಗಳ ಪಾತ್ರಗಳ ಕುರಿತು ಪ್ರಸ್ತುತಪಡಿಸಲಾದ ಸಂಗತಿಗಳನ್ನು ಸಹ ನಾವು ಪರಿಗಣಿಸಬೇಕು ಎಂದು ಪೀಠ ಹೇಳಿದೆ.

ಡಿಸೆಂಬರ್ 10 ರಂದು, ದೆಹಲಿ ಪೊಲೀಸರ ಪರವಾಗಿ ವಿಚಾರಣೆಗೆ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಮತ್ತು ಆರೋಪಿಗಳ ಪರವಾಗಿ ಹಾಜರಾದ ಹಿರಿಯ ವಕೀಲರಾದ ಕಪಿಲ್ ಸಿಬಲ್, ಅಭಿಷೇಕ್ ಸಿಂಘ್ವಿ, ಸಿದ್ಧಾರ್ಥ ದವೆ, ಸಲ್ಮಾನ್ ಖುರ್ಷಿದ್ ಮತ್ತು ಸಿದ್ಧಾರ್ಥ್ ಲುತ್ರಾ ಅವರ ವಾದಗಳನ್ನು ಆಲಿಸಿದ ನಂತರ, ಸುಪ್ರೀಂ ಕೋರ್ಟ್ ಆರೋಪಿಗಳ ಪ್ರತ್ಯೇಕ ಅರ್ಜಿಗಳ ಮೇಲಿನ ತೀರ್ಪನ್ನು ಕಾಯ್ದಿರಿಸಿತು.

ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರೋಧಿಸಿ 2020ರಲ್ಲಿ ದೆಹಲಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದ ವೇಳೆ ಗಲಭೆ ನಡೆದಿತ್ತು. ಆ ಗಲಭೆಗೆ ಸಂಚು ರೂಪಿಸಿದ ಆರೋಪದ ಮೇಲೆ ಜೆಎನ್‍ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

7 ಆರೋಪಿಗಳ ವಿರುದ್ಧ ಯುಎಪಿಎ ಪ್ರಕರಣ ದಾಖಲು!
ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಸೇರಿದಂತೆ ಒಟ್ಟು ಏಳು ಆರೋಪಿಗಳ ವಿರುದ್ಧ ಯುಎಪಿಎ (ಕಾನೂನುಬಾಹಿರ ಚಟುವಟಿಕೆಗಳು ತಡೆ ಕಾಯ್ದೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳು ಕಳೆದ ಐದು ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಇದ್ದರೂ ವಿಚಾರಣೆ ಆರಂಭವಾಗಿಲ್ಲ ಎಂಬುದನ್ನು ತಮ್ಮ ವಕೀಲರು ಕೋರ್ಟ್ ಗಮನಕ್ಕೆ ತಂದಿದ್ದರು. ಇತರ ಹಲವು ಆರೋಪಿಗಳಿಗೆ ಈಗಾಗಲೇ ಜಾಮೀನು ದೊರೆತಿರುವುದರಿಂದ ತಮಗೂ ಅದೇ ಪರಿಹಾರ ನೀಡಬೇಕು ಎಂದು ಅವರು ವಾದಿಸಿದ್ದರು. ಆದರೆ ಸುಪ್ರೀಂ ಕೋರ್ಟ್, “ಎಲ್ಲಾ ಆರೋಪಿಗಳನ್ನು ಒಂದೇ ತೂಕದ ಕಲ್ಲಿನಲ್ಲಿ ತೂಗಲು ಸಾಧ್ಯವಿಲ್ಲ. ಅಪರಾಧದ ಗಂಭೀರತೆ ಮತ್ತು ಆರೋಪಿಯ ಪಾತ್ರವನ್ನು ಪ್ರತ್ಯೇಕವಾಗಿ ಪರಿಶೀಲಿಸಬೇಕಾಗುತ್ತದೆ” ಎಂದು ಹೇಳಿತು. ಈ ಹಿನ್ನೆಲೆಯಲ್ಲಿ, ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ವಿರುದ್ಧದ ಆರೋಪಗಳು ಹೆಚ್ಚು ಗಂಭೀರವಾಗಿವೆ ಎಂಬ ಕಾರಣ ನೀಡಿ ಜಾಮೀನು ನಿರಾಕರಿಸಿತು.

ಪ್ರಕರಣದ ಹಿನ್ನೆಲೆ?
2020ರ ದೆಹಲಿ ಗಲಭೆಯ ಹಿಂದಿನ “ದೊಡ್ಡ ಪಿತೂರಿ” ಆರೋಪಕ್ಕೆ ಸಂಬಂಧಿಸಿದಂತೆ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಸೇರಿ ಸಂಬಂಧಿಸಿದ ಇನ್ನಿತರರನ್ನು ಬಂಧಿಸಲಾಗಿತ್ತು. 2019–20ರ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಗಳಲ್ಲಿ ಸಕ್ರಿಯರಾಗಿದ್ದ ಈ ಇಬ್ಬರು, ಫೆಬ್ರವರಿ 2020ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಕೋಮು ಹಿಂಸಾಚಾರವನ್ನು ಉದ್ದೇಶಪೂರ್ವಕವಾಗಿ ಪ್ರಚೋದಿಸಿದ್ದಾರೆ ಎಂಬ ಗಂಭೀರ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದರು. ಈ ಗಲಭೆಯಲ್ಲಿ 53 ಜನರು ಸಾವನ್ನಪ್ಪಿದ್ದರು. ದಿಲ್ಲಿ ಪೊಲೀಸರ ಪ್ರಕಾರ, ಅಂತರರಾಷ್ಟ್ರೀಯ ಗಮನ ಸೆಳೆಯಲು ಪೂರ್ವ ಯೋಜಿತ ಪಿತೂರಿ ರೂಪಿಸಲಾಗಿತ್ತು. ಉಮರ್ ಖಾಲಿದ್ (ಸೆಪ್ಟೆಂಬರ್ 2020) ಮತ್ತು ಶಾರ್ಜೀಲ್ ಇಮಾಮ್ (ಜನವರಿ 2020) ಅವರನ್ನು ಯುಎಪಿಎ ಸೇರಿದಂತೆ ಗಂಭೀರ ಕಾಯ್ದೆಗಳ ಅಡಿಯಲ್ಲಿ ಬಂಧಿಸಲಾಗಿದೆ. ಆರೋಪಗಳು ಗಂಭೀರವಾಗಿರುವುದರಿಂದ ನ್ಯಾಯಾಲಯಗಳು ಜಾಮೀನು ನಿರಾಕರಿಸಿದ್ದು, ಇಬ್ಬರೂ ಇನ್ನೂ ವಿಚಾರಣಾಧೀನ ಕೈದಿಗಳಾಗಿಯೇ ಜೈಲಿನಲ್ಲಿ ಇದ್ದಾರೆ.

 

Tags:
error: Content is protected !!