ಬಿಹಾರ: ಪೊಲೀಸರ ವಶದಲ್ಲಿದ್ದ ಪತಿ-ಪತ್ನಿ ಸಾವನ್ನಪ್ಪಿದ್ದ ಘಟನೆ ಬಿಹಾರದ ಅರಾರಿಯ ಜಿಲ್ಲೆಯಲ್ಲಿ ನಡೆದಿದೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದಾರೆ. ಪೊಲೀಸರು ಚಿತ್ರಹಿಂಸೆ ನೀಡಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮಸ್ಥರು ಬೆಂಕಿ ಹಚ್ಚಿ, ಕಲ್ಲು ತೂರಾಟ ನಡೆಸಿದ ಕಾರಣ ಪೊಲೀಸರು ಸ್ವಯಂ ರಕ್ಷಣೆಗಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈ ಘಟನೆಯಿಂದ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಹೆಚ್ಚಿನ ಪೊಲೀಸರನ್ನೂ ನಿಯೋಜಿಸಲಾಗಿದೆ.
ಘಟನೆಯ ವಿವರ:
32 ವರ್ಷದ ವ್ಯಕ್ತಿಯೊಬ್ಬರು ತಮ್ಮ ಹೆಂಡತಿ ಸಾವಿಗೀಡಾದ ಬಳಿಕ ಹೆಂಡತಿಯ ತಂಗಿಯನ್ನು ಮದುವೆಯಾಗಿದ್ದರು. ಈ ವಿಷಯ ತಿಳಿದ ಪೊಲೀಸರು ವ್ಯಕ್ತಿ ಹಾಗೂ ಆತನ ಅಪ್ರಾಪ್ತ ವಯಸ್ಕ ಪತ್ನಿಯನ್ನು ಬಾಲ್ಯ ವಿವಾಹ ಆರೋಪದ ಮೇರೆಗೆ ಠಾಣೆಗೆ ಕರೆತಂದಿದ್ದರು. ಪೊಲೀಸರ ವಶದಲ್ಲಿದ್ದ ಈ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿಷಯ ತಿಳಿದ ಗ್ರಾಮಸ್ಥರು ಪೊಲೀಸರೇ ಇಬ್ಬರನ್ನು ಕೊಂದಿದ್ದಾರೆ ಎಂದು ಆಕ್ರೋಶಗೊಂಡು ಠಾಣೆಗೆ ಬೆಂಕಿ ಹಚ್ಚಿ, ಪೊಲೀಸ್ ವಾಹನವನ್ನು ದ್ವಂಸಗೊಳಿಸಿದರು. ಉದ್ರಿಕ್ತ ಗ್ರಾಮಸ್ಥರ ದಾಳಿಯಲ್ಲಿ ಆರು ಮಂದಿ ಪೊಲೀಸರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಪೊಲೀಸರ ಸ್ವಯಂ ರಕ್ಷಣೆಗಾಗಿ ಗಾಳಿಯಲ್ಲಿ ಗುಂಡಿ ಹಾರಿಸಿದ ಪರಿಣಾಮ ಇಬ್ಬರು ನಾಗರಿಕರು ಗಾಯಕೊಂಡಿದ್ದಾರೆ ಎನ್ನಲಾಗಿದೆ.
ಠಾಣೆಯಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ವ್ಯಕ್ತಿಯು ಲಾಕಪ್ ಬಾಗಿಲು ಹತ್ತಿ, ಬಟ್ಟೆಯಿಂದ ನೇಣು ಬಿಗಿದುಕೊಂಡಿದ್ದಾರೆ. ಈ ಘಟನೆಯಿಂದ ಉಂಟಾದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 17 ಮಂದಿಯನ್ನು ಬಂಧಿಸಲಾಗಿದೆ. ಉಳಿದವರನ್ನು ಸಿಸಿಟಿವಿ ದೃಶ್ಯಗಳ ನೆರವಿನಿಂದ ಪತ್ತೆಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
angry-mob-sets-police-station-ablaze-after-man-and-his-minor-wife-die-by-suicide-in-custody-in-bihar





