ನವದೆಹಲಿ: ಜಾರ್ಖಂಡ್ ಹಾಗೂ ವಯನಾಡಿದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮತದಾರರಿಗೆ ಟ್ವೀಟ್ ಮಾಡುವ ಮೂಲಕ ಧನ್ಯವಾದ ತಿಳಿಸಿದ್ದಾರೆ.
ಮಹಾರಾಷ್ಟ್ರ, ಜಾರ್ಖಂಡ್ ಸೇರಿದಂತೆ ಇನ್ನಿತರ ಚುನಾವಣೆಗಳ ಫಲಿತಾಂಶ ಇಂದು ಹೊರಬಿದ್ದಿದ್ದು, ಜಾರ್ಖಂಡ್ ಹಾಗೂ ವಯನಾಡು ಕ್ಷೇತ್ರದಲ್ಲಿ ಕಾಂಗ್ರೆಸ್ ವಿಜಯ ಪತಾಕೆ ಹಾರಿಸಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಟ್ವೀಟ್ ಮಾಡಿ ಧನ್ಯವಾದ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಜಾರ್ಖಂಡ್‌ನಲ್ಲಿ ಇಂಡಿಯಾ ಒಕ್ಕೂಟಕ್ಕೆ ಮತ ಚಲಾಯಿಸಿ ಗೆಲುವು ನೀಡಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು. ಸಿಎಂ ಹೇಮಂತ್ ಸೊರೆನ್ ಅವರಿಗೆ ಹಾಗೂ ಕಾಂಗ್ರೆಸ್, ಜೆಎಂಎಂ ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆ ತಿಳಿಸಿದರು. ಈ ಗೆಲುವು ಕೇವಲ ಸಂವಿಧಾನದ ಜಯವಲ್ಲ. ಇದು ನೆಲ, ಜಲ, ಅರಣ್ಯಕ್ಕೆ ಸಲ್ಲುವ ಜಯವಾಗಿದೆ ಎಂದು ಬರೆದುಕೊಂಡಿದ್ದಾರೆ.
ಇನ್ನು ಮಹಾರಾಷ್ಟ್ರ ಚುನಾವಣೆ ಫಲಿತಾಂಶದ ಬಗ್ಗೆಯೂ ಬರೆದುಕೊಂಡಿರುವ ರಾಹುಲ್ ಗಾಂಧಿ ಅವರು, ರಾಜ್ಯದ ಎಲ್ಲಾ ಮತದಾರರಿಗೆ, ಕಾರ್ಯಕರ್ತರ ಶ್ರಮಕ್ಕಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ. ಆದರೆ ಮಹಾರಾಷ್ಟ್ರದ ಚುನಾವಣಾ ಫಲಿತಾಂಶ ಅನಿರೀಕ್ಷಿತವಾಗಿದ್ದು, ಈ ಕುರಿತು ವಿವರವಾಗಿ ವಿಶ್ಲೇಷಣೆ ನಡೆಸುತ್ತೇವೆ ಎಂದಿದ್ದಾರೆ.
ವಯನಾಡಿನಲ್ಲಿರುವ ನನ್ನ ಕುಟುಂಬದ ಜನರೆ ಪ್ರಿಯಾಂಕಾ ಅವರ ಮೇಲೆ ಇಟ್ಟಿರುವ ನಂಬಿಕೆಯ ಕುರಿತು ನನಗೆ ಹೆಮ್ಮೆಯಿದೆ. ವಯನಾಡಿನ ಪ್ರಗತಿಗಾಗಿ ಪ್ರಿಯಾಂಕಾ ಧೈರ್ಯದಿಂದ ಮುನ್ನಡೆಯುತ್ತಾಳೆ. ಈ ಬಗ್ಗೆ ನನಗೆ ನಂಬಿಕೆಯಿದೆ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.