ನವದೆಹಲಿ: ಸಿಎಂ ಸಿದ್ದರಾಮಯ್ಯ ಅಪರಾಧಿ ಸ್ಥಾನದಲ್ಲಿದ್ದು, ಅವರು ರಾಜೀನಾಮೆ ನೀಡಲೇಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.
ಈ ಬಗ್ಗೆ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು, ರಾಜ್ಯಪಾಲರ ನೋಟಿಸ್‌ಗೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ಸಚಿವರು ಭಯಗೊಂಡಿದ್ದಾರೆ. ಇಂದಿನ ಸಂಪುಟ ಸಭೆಯಲ್ಲಿ ರಾಜ್ಯಪಾಲರ ವಿರುದ್ಧ ನಿರ್ಣಯ ತೆಗೆದುಕೊಂಡಿದ್ದಾರೆ. ರಾಜ್ಯ ಸರ್ಕಾರ ಕಾನೂನಿನ ವಿರುದ್ಧ ಕೆಲಸ ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಅವರೇ ನೀವು ತಪ್ಪು ಮಾಡಿಲ್ಲ ಅಂದ್ರೆ ಯಾಕೆ ಹೆದರುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ. ನಿರಪರಾಧಿ ಎಂದು ಸಾಬೀತಾದರೆ ಮತ್ತೆ ಅಧಿಕಾರ ಹಿಡಿಯಿರಿ. ರಾಜ್ಯಪಾಲರ ನೋಟಿಸ್‌ಗೆ ನೀವು ಉತ್ತರ ನೀಡಲೇಬೇಕು. ಉತ್ತರ ನೀಡುವವರೆಗೂ ನಾವು ಸುಮ್ಮನೆ ಕೂರಲ್ಲ ಹೋರಾಟ ಮುಂದುವರಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರದ ಸಚಿವರ ವಿರುದ್ಧ ಗಂಭೀರ ಆರೋಪ ಮಾಡಿದರು.





