ಉತ್ತರಾಖಂಡ್: ಉತ್ತರಾಖಂಡ್‌ನಲ್ಲಿ ಭಾರೀ ಮಳೆಯಾಗುತ್ತಿದ್ದು, ಮೇಘಸ್ಫೋಟದಿಂದ 5 ಮಂದಿ ಸಾವನ್ನಪ್ಪಿದ್ದು, ಸುಮಾರು 11 ಮಂದಿ ನಾಪತ್ತೆಯಾಗಿದ್ದಾರೆ.
ಉತ್ತರಾಖಂಡದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಭೂಕುಸಿತ ಸಂಭವಿಸಿದೆ. ಪರಿಣಾಮ ಹಲವು ಮನೆಗಳಿಗೆ ಹಾನಿಯಾಗಿದ್ದು, ಹಲವರು ಅವಶೇಷಗಳಡಿ ಸಮಾಧಿಯಾಗಿದ್ದಾರೆ.
ರಾತ್ರಿಯಿಡೀ ಸುರಿದ ಧಾರಾಕಾರ ಮಳೆಯಿಂದ ಬಾಗೇಶ್ವರ ಜಿಲ್ಲೆಯ ಕಪ್‌ಕೋಟ್ ಪ್ರದೇಶದ ಪೌಸಾರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆರು ಮನೆಗಳು ಹಾನಿಗೊಳಗಾಗಿವೆ. ಇದರಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮೂವರು ಕಾಣೆಯಾಗಿದ್ದಾರೆ.
ಇನ್ನು ಚಲೋಲಿ ಜಿಲ್ಲೆಯ ಮೊಪಟಾ ಗ್ರಾಮದಲ್ಲಿ ಭೂಕುಸಿತದಿಂದ ಒಂದು ಮನೆ ಹಾಗೂ ದನದ ಕೊಟ್ಟಿಗೆ ಕುಸಿದು ಹೋಗಿದ್ದು, ಇದರಲ್ಲಿ ದಂಪತಿ ಸಾವನ್ನಪ್ಪಿದ್ದಾರೆ.
ದುದ್ರಪ್ರಯಾಗ ಜಿಲ್ಲೆಯ ಬಸುಕೆದಾರ್ ಪ್ರದೇಶದಲ್ಲಿ ನಿರಂತರ ಮಳೆ ಮತ್ತು ಭೂಕುಸಿತಗಳು ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದು, ಹಲವರು ನಾಪತ್ತೆಯಾಗಿದ್ದಾರೆ.
ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಬಂಧಿಸಲಾಗಿದೆ. ಯಾತ್ರಿಕರು ರಸ್ತೆಯ ಬಗ್ಗೆ ಮಾಹಿತಿ ಪಡೆದ ಬಳಿಕ ಮಾತ್ರ ಪ್ರಯಾಣ ಆರಂಭಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.





