ಹೊಸದಿಲ್ಲಿ: ಇತಿಹಾಸ ಪ್ರಸಿದ್ದ ಕೇರಳದ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ತೆರಳುವ ಭಕ್ತರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ವಿಮಾನದಲ್ಲಿ ಇರುಮುಡಿ ತೆಗೆದುಕೊಂಡು ಹೋಗಲು ಕೇಂದ್ರ ನಾಗರಿಕ ವಿಮಾನಯಾನ ಇಲಾಖೆ ಅನುಮತಿ ನೀಡಿದೆ. ಈ ಆದೇಶವು 2025ರ ಜನವರಿ 20ರವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ ಎಂದು ತಿಳಿಸಲಾಗಿದೆ.
ಇಷ್ಟು ದಿನ ಅಯ್ಯಪ್ಪ ಸ್ವಾಮಿ ಭಕ್ತರು ಬರೀ ಕಾರು, ಬಸ್, ರೈಲುಗಳಲ್ಲೇ ಪ್ರಯಾಣ ಮಾಡುತ್ತಿದ್ದರು. ಇರುಮುಡಿ ಕಟ್ಟು ತೆಗೆದುಕೊಂಡು ವಿಮಾನದಲ್ಲಿ ಹೋಗಲು ಅವರಿಗೆ ಅವಕಾಶ ಇರಲಿಲ್ಲ. ಆದರೆ, ಈಗ ಕೇಂದ್ರ ಸರ್ಕಾರವೂ ಇರುಮುಡಿಯನ್ನು ವಿಮಾನ ಕ್ಯಾಬಿನ್‍ನಲ್ಲಿ ತೆಗೆದುಕೊಂಡು ಹೋಗಲು ಅವಕಾಶ ನೀಡಿದೆ. ಹೀಗಾಗಿ ಇನ್ನು ಇರುಮುಡಿ ಸಮೇತ ಅಯ್ಯಪ್ಪ ಭಕ್ತರು ವಿಮಾನದಲ್ಲಿ ಪ್ರಯಾಣಿಸಬಹುದಾಗಿದೆ. ಚೆಕ್ ಇನ್ ಬ್ಯಾಗೇಜ್ ಬದಲು ಅಯ್ಯಪ್ಪ ಭಕ್ತರು ಇರುಮುಡಿ ತೆಗೆದುಕೊಂಡು ಹೋಗಬಹುದು. ಈ ವೇಳೆ ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ಮಾಡಲಾಗುತ್ತದೆ.
ಕಳೆದ ವರ್ಷ ಏಕಾಏಕಿ ಲಕ್ಷಾಂತರ ಭಕ್ತರು ಅಯ್ಯಪ್ಪ ದರ್ಶನಕ್ಕೆ ಆಗಮಿಸಿದ್ದರಿಂದ ಮತ್ತು ಅದನ್ನು ನಿರ್ವಹಿಸಲು ಸರ್ಕಾರ ಸೂಕ್ತ ವ್ಯವಸ್ಥೆ ಮಾಡಿಕೊಂಡಿರದ ಕಾರಣ ಭಾರೀ ಅವ್ಯವಸ್ಥೆ ಉಂಟಾಗಿತ್ತು. ಹೀಗಾಗಿ ಪ್ರಸಿದ್ದ ಶಬರಿಮಲೆ ದೇಗುಲದ ವಾರ್ಷಿಕ ಮಂಡಲಂ- ಮಕರವಿಳಕ್ಕು ಯಾತ್ರೆಗೆ ಈ ವರ್ಷ ಆನ್‍ಲೈನ್‍ನಲ್ಲಿ ಬುಕ್ ಮಾಡಿದವರಿಗೆ ಮಾತ್ರ ಶಬರಿಮಲೆಗೆ ಪ್ರವೇಶ ನೀಡಲು ಕೇರಳ ಸರ್ಕಾರ ನಿರ್ಧರಿಸಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಆನ್‍ಲೈನ್ ಬುಕ್ಕಿಂಗ್ ಹಿಂಪಡೆದಿತ್ತು.