ನವದೆಹಲಿ: 2047ರ ವಿಕಸಿತ ಭಾರತ ಕನಸು ಸಾಕಾರಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಆಯವ್ಯಯ ಬಹುದೊಡ್ಡ ಕೊಡುಗೆ ನೀಡಲಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಬಜೆಟ್ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ ಅವರು, ಕೃಷಿಕರ ಬಗ್ಗೆ ಅತಿಹೆಚ್ಚು ಕಾಳಜಿ ವಹಿಸಿದ ಬಜೆಟ್ ಇದಾಗಿದೆ ಹಾಗೂ ಮಧ್ಯಮ ವರ್ಗದ ಜನರ ಬದುಕನ್ನು ಸುಲಭ, ಸರಳಗೊಳಿಸುವ ಬಜೆಟ್ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಿಗಳಾದ ನರೇಂದ್ರ ಮೋದಿ ಅವರ ದೂರದೃಷ್ಟಿ ಹಾಗೂ ರೈತಪರ ಆಲೋಚನೆಗಳಿಗೆ 2025ನೇ ಸಾಲಿನ ಬಜೆಟ್ ಕೈಗನ್ನಡಿ ಆಗಿದೆ. ಸಾವಯವ ಕೃಷಿಗೆ ಉತ್ತೇಜನ, ಕೃಷಿಯಲ್ಲಿ ಸುಸ್ಥಿರತೆಗೆ ಒತ್ತು, ರೈತರ ವೆಚ್ಚ ತಗ್ಗಿಸುವ ನಿಟ್ಟಿನಲ್ಲಿ ಅಗತ್ಯ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ರೈತರು ಸಶಕ್ತಗೊಂಡು ಉತ್ತಮ ಆದಾಯ ಗಳಿಸುವ, ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ ಮತ್ತು ಭವಿಷ್ಯದ ಸವಾಲುಗಳಿಗೆ ಭಾರತೀಯ ಕೃಷಿಯನ್ನು ಸಜ್ಜುಗೊಳಿಸುವ ಆಯವ್ಯಯ ಇದಾಗಿದೆ ಎಂದು ತಿಳಿಸಿದ್ದಾರೆ.