ನವದೆಹಲಿ: ಕೇಂದ್ರ ಸರ್ಕಾರಕ್ಕೆ ಹೆಚ್ಚು ತೆರಿಗೆ ನೀಡುವ ರಾಜ್ಯಗಳಿಗೆ ಕೇಂದ್ರ ಬಜೆಟ್‌ನಿಂದ ಅನ್ಯಾಯವಾಗಿದೆ. ಇಷ್ಟು ನಿರಾಶೆ, ನಿರ್ಲಕ್ಷ್ಯ ಮಾಡುತ್ತಾರೆ ಎಂದು ಅಂದುಕೊಂಡಿರಲಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕೇಂದ್ರ ಬಜೆಟ್ ಬಗ್ಗೆ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೆರಿಗೆ ಕಟ್ಟುವ ಎರಡನೇ ಅತಿದೊಡ್ಡ ರಾಜ್ಯ ನಮ್ಮದು. ಐಟಿ ರಫ್ತಿನಲ್ಲಿ ನಾವೇ ಮುಂದಿದ್ದೇವೆ. ಆದರೂ ನಮಗೆ ಈ ಬಜೆಟ್‌ನಲ್ಲಿ ಸ್ವಲ್ಪವೂ ಅನುಕೂಲ ಆಗಿಲ್ಲ ಎಂದು ಕಿಡಿಕಾರಿದರು.
ಬಜೆಟ್ ಪೂರ್ವ ಸಭೆಯಲ್ಲಿ ಪ್ರಧಾನಮಂತ್ರಿಗಳಿಗೆ, ಹಣಕಾಸು ಸಚಿವರಿಗೆ ರಾಜ್ಯಕ್ಕೆ ಅನುದಾನಕ್ಕಾಗಿ ಮನವಿ ಮಾಡಿದ್ದೇವು. ಆದರೆ ಏನು ಪ್ರಯೋಜನವಾಗಿಲ್ಲ. ತೆರಿಗೆ ವಿನಾಯಿತಿ ದೊಡ್ಡ ವಿಷಯ ಅಲ್ಲ. ಎಷ್ಟು ಜನ ಟ್ಯಾಕ್ಸ್ ಕಟ್ಟೋರು ಇದ್ದಾರೆ. ಬೆಲೆ ಏರಿಕೆ ಜಾಸ್ತಿ ಆಗಿದೆ. ಈ ಬಜೆಟ್‌ನಿಂದ ದೊಡ್ಡ ಪ್ರಯೋಜನ ಏನಿಲ್ಲ ಎಂದು ಹೇಳಿದರು.
ಬಜೆಟ್‌ನ ಪ್ರತಿಯೊಂದು ಲೈನ್ ಓದಿದೆ. ಬಜೆಟ್ ಓದಬೇಕು ಓದಿದ್ದಾರೆ. ಬೇರೆ ರಾಜ್ಯಗಳ ಸುದ್ದಿ ಬೇಡ, ಕರ್ನಾಟಕ ರಾಜ್ಯಕ್ಕೆ 5,000 ಕೋಟಿ ರೂ. ನೀಡುತ್ತೇವೆ ಎಂದರು ಕೊಟ್ಟರಾ? ಹಾಗೆಯೇ ಇತರೆ ರಾಜ್ಯಗಳಿಗೂ ಆಗಬಹುದು ಎಂದು ವಾಗ್ದಾಳಿ ನಡೆಸಿದರು.