ಟೆಹರಾನ್ : ತನ್ನ ಪ್ರಮುಖ ಪರಮಾಣು ತಾಣಗಳ ಮೇಲೆ ಅಮೆರಿಕ ನಡೆಸಿರುವ ಬಾಂಬ್ ದಾಳಿಗೆ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಇರನ್ ಪ್ರತಿಜ್ಞೆ ಮಾಡಿದೆ.
ಭಾನುವಾರ ಮುಂಜಾನೆ ಫೋರ್ಡೊ, ನಟಾಂಜ್ ಮತ್ತು ಇಸ್ಫಹಾನ್‌ನಲ್ಲಿರುವ ಇರಾನಿನ ಪರಮಾಣು ಸೌಲಭ್ಯಗಳ ಮೇಲೆ ಅಮೆರಿಕಾ ಬಂಕರ್ ಬಸ್ಟರ್ ಬಾಂಬ್ ಬಳಸಿ ದಾಳಿ ಮಾಡಿತ್ತು. ಬಳಿಕ ಈ ಕುರಿತು ಪ್ರತಿಕ್ರಿಯೆ ನೀಡಿರುವ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಫ್ಚಿ ಅಮೆರಿಕ ದಾಳಿಗಳು ಶಾಶ್ವತ ಪರಿಣಾಮಗಳನ್ನು ಬೀರುತ್ತವೆ ಎಂದಿದ್ದಾರೆ.
ಇರಾನಿನ ಶಾಂತಿಯುತ ಪರಮಾಣು ತಾಣಗಳ ಮೇಲೆ ದಾಳಿ ಮಾಡುವ ಮೂಲಕ ಅಮೆರಿಕವು ವಿಶ್ವಸಂಸ್ಥೆಯ ನಿಯಮಗಳನ್ನು ಉಲ್ಲಂಘನೆ ಮಾಡಿದೆ ಎಂದ ಕಿಡಿಕಾರಿರುವ ಅರಫ್ಚಿ ಇಂದು ಬೆಳಿಗ್ಗೆ ನಡೆದ ದಾಳಿಗಳು ಅತಿರೇಕದಿಂದ ಕೂಡಿದವು. ಈ ಅತ್ಯಂತ ಅಪಾಯಕಾರಿ, ಕಾನೂನುಬಾಹಿರ ಮತ್ತು ಕ್ರಿಮಿನಲ್ ನಡವಳಿಕೆಯ ಬಗ್ಗೆ ವಿಶ್ವಸಂಸ್ಥೆಯ ಪ್ರತಿಯೊಬ್ಬ ಸದಸ್ಯ ರಾಷ್ಟ್ರ ಧ್ವನಿ ಎತ್ತಬೇಕು ಎಂದು ಹೇಳಿದ್ದಾರೆ.
ಇರಾನ್‌ಗೆ ತನ್ನ ದೇಶದ ಸಾರ್ವಭೌಮತ್ವ, ಹಿತಾಸಕ್ತಿ ಮತ್ತು ಜನರನ್ನು ರಕ್ಷಿಸಿಕೊಳ್ಳುವ ಹಕ್ಕಿದೆ. ಮಾಸ್ಕೋಗೆ ತೆರಳಿ ರಷ್ಯಾ ಅಧ್ಯಕ್ಷ ಪುಟಿನ್ ಭೇಟಿ ಮಾಡುವುದಾಗಿ ಅವರು ತಿಳಿಸಿದ್ದಾರೆ.
ಮಾತುಕತೆಗೆ ಯುರೋಪಿಯನ್ ಒಕ್ಕೂಟ ಒತ್ತಾಯ
ಎಲ್ಲ ದೇಶಗಳು ಯುದ್ಧದಿಂದ ಹಿಂದೆ ಸರಿದು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ 27 ರಾಷ್ಟ್ರಗಳ ಯುರೋಪಿಯನ್ ಒಕ್ಕೂಟವು ಒತ್ತಾಯಿಸಿದೆ.