ವಾಷಿಂಗ್ಟನ್ : ಇರಾನ್ ವಿರುದ್ಧದ ಯುದ್ಧದ ನಡುವೆಯೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊಸದಾಗಿ ಸುಂಕ ಸಮರ ಆರಂಭಿಸಿದ್ದಾರೆ. ಈ ಬಾರಿ ಟ್ರಂಪ್ ಕಣ್ಣು ಬ್ರಾಂಡೆಡ್ ಔಷಧಗಳ ಮೇಲೆ ಬಿದ್ದಿದ್ದು ಪೇಟೆಂಟ್ ಹೊಂದಿರುವ ಮತ್ತು ಬ್ರಾಂಡೆಡ್ ಔಷಧಗಳನ್ನು ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ಕಂಪನಿಗಳ ಮೇಲೆ ಶೇ. 100 ಸುಂಕ ವಿಧಿಸುವ ಕಾರ್ಯಾದೇಶಕ್ಕೆ ಅವರು ಸಹಿ ಹಾಕಿದ್ದಾರೆ.
ಔಷಧ ತಯಾರಿಕಾ ಕಂಪನಿಗಳು ತಮ್ಮ ಉತ್ಪಾದನಾ ಘಟಕಗಳನ್ನು ಅಮೆರಿಕಕ್ಕೆ ಸ್ಥಳಾಂತರಿಸುವಂತೆ ಒತ್ತಡ ಹೇರುವುದು, ಔಷಧಗಳಿಗಾಗಿ ಚೀನಾ ಅಥವಾ ಇತರ ದೇಶಗಳ ಮೇಲೆ ಅವಲಂಬಿತವಾಗುವುದನ್ನು ಕಡಿಮೆ ಮಾಡುವುದು ಮತ್ತು ಅಮೆರಿಕದ ಒಳಗೇ ಉದ್ಯೋಗ ಹಾಗೂ ಉತ್ಪಾದನೆಯನ್ನು ಹೆಚ್ಚಿಸುವುದು ಈ ನೀತಿಯ ಮುಖ್ಯ ಗುರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಯಾವ ಕಂಪನಿಗಳು ಮುಂದಿನ 4 ವರ್ಷಗಳಲ್ಲಿ ಅಮೆರಿಕದಲ್ಲಿ ಕಾರ್ಖಾನೆ ತೆರೆಯಲು ಒಪ್ಪುತ್ತವೆಯೋ ಅವುಗಳ ಮೇಲಿನ ಸುಂಕವನ್ನು ಶೇ. 20 ಕ್ಕೆ ಇಳಿಸಲು ಈ ಕಾರ್ಯಾದೇಶದಲ್ಲಿ ಅವಕಾಶ ನೀಡಲಾಗಿದೆ. ಅಮೆರಿಕದ ಹೊರಗೆ ತಯಾರಾದ ಮತ್ತು ಯಾವುದೇ ರಿಯಾಯಿತಿ ಒಪ್ಪಂದ ಮಾಡಿಕೊಳ್ಳದ ಪೇಟೆಂಟ್ ಅಥವಾ ಬ್ರಾಂಡೆಡ್ ಔಷಧಗಳ ಮೇಲೆ ಶೇ. 100 ಸುಂಕ ವಿಧಿಸಲಾಗುತ್ತದೆ.
ಒಂದು ಕಂಪನಿಯು ಅಮೆರಿಕದಲ್ಲಿ ಉತ್ಪಾದನಾ ಘಟಕ ತೆರೆಯುವುದರ ಜೊತೆಗೆ, ಅಮೆರಿಕಕ್ಕೆ ಅತಿ ಕಡಿಮೆ ಬೆಲೆಗೆ ಔಷಧ ನೀಡಲು ಒಪ್ಪಂದ ಮಾಡಿಕೊಂಡರೆ ಮಾತ್ರ ಯಾವುದೇ ಸುಂಕ ಇರುವುದಿಲ್ಲ. ದೊಡ್ಡ ಕಂಪನಿಗಳಿಗೆ ತಮ್ಮ ಯೋಜನೆ ತಿಳಿಸಲು 120 ದಿನಗಳ ಕಾಲಾವಕಾಶ ನೀಡಲಾಗಿದೆ, ಸಣ್ಣ ಕಂಪನಿಗಳಿಗೆ 180 ದಿನಗಳ ಗಡುವು ನೀಡಲಾಗಿದೆ. ಯುರೋಪಿಯನ್ ಯೂನಿಯನ್, ಜಪಾನ್, ದಕ್ಷಿಣ ಕೊರಿಯಾ ಮತ್ತು ಸ್ವಿಟ್ಜಲೆರ್ಂಡ್‍ನಂತಹ ದೇಶಗಳ ಔಷಧಗಳಿಗೆ ಒಪ್ಪಂದದ ಪ್ರಕಾರ ಕೇವಲ ಶೇ,15 ಸುಂಕ ಅನ್ವಯವಾಗುತ್ತದೆ. ಬ್ರಿಟನ್‍ಗೆ ಇದಕ್ಕಿಂತಲೂ ಕಡಿಮೆ ದರ ಅಥವಾ ಸಂಪೂರ್ಣ ವಿನಾಯಿತಿ ಸಿಗುವ ಸಾಧ್ಯತೆಯಿದೆ. ಸದ್ಯಕ್ಕೆ ಈ ಕಾರ್ಯಾದೇಶವು ಸಾಮಾನ್ಯ ಜನರಿಕ್ ಔಷಧಗಳಿಗೆ ಅನ್ವಯಿಸುವುದಿಲ್ಲ. ಅಮೆರಿಕದಲ್ಲಿ ಬಳಸುವ ಒಟ್ಟು ಔಷಧಗಳಲ್ಲಿ ಸುಮಾರು ಶೇ.90 ಜನರಿಕ್ ಆಗಿರುವುದರಿಂದ, ರೋಗಿಗಳಿಗೆ ತಕ್ಷಣದ ಬೆಲೆ ಏರಿಕೆಯ ಹೊರೆ ಬೀಳದಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರಿಂದ ಭಾರತದಂತಹ ದೇಶಗಳಿಗೆ ಸದ್ಯಕ್ಕೆ ದೊಡ್ಡ ಮಟ್ಟದ ಆರ್ಥಿಕ ಹೊಡೆತ ಇಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.





