ಬೆಂಗಳೂರು: ಅಮೇರಿಕಾದ ವರ್ಜೀನಿಯಾದ ರಿಚ್ಮಂಡ್‌ನಲ್ಲಿ ಆಗಸ್ಟ್.30ರಿಂದ ಸೆಪ್ಟೆಂಬರ್.1ರವರೆಗೆ ನಡೆಯಲಿರುವ 12ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಪಾಲ್ಗೊಳ್ಳಲಿದ್ದಾರೆ.
ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಸಮ್ಮೇಳನ ನಡೆಯಲಿದ್ದು, ಬಸವರಾಜ ಹೊರಟ್ಟಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅಲ್ಲಿ ವಾಸಿಸುವ ಕನ್ನಡಿಗರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಭಾಷಣದಲ್ಲಿ ಕನ್ನಡ ನಾಡು, ನುಡಿ, ಭಾಷಾ ಬೆಳವಣಿಗೆ, ಕನ್ನಡದ ಅಸ್ಮಿತೆ, ಕನ್ನಡ ಭಾಷೆಯ ಪ್ರಚಾರಕ್ಕೆ ಕೈಗೊಳ್ಳಬೇಕಾದ ಇಂದಿನ ತುರ್ತು ಅವಶ್ಯಕತೆಗಳು ಸೇರಿದಂತೆ ಹಲವಾರು ಮಹತ್ವದ ವಿಷಯಗಳ ಕುರಿತು ವಿಚಾರ ಹಂಚಿಕೊಳ್ಳಲಿದ್ದಾರೆ.
ನಾಳೆ ರಾತ್ರಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಮೇರಿಕಾದ ವರ್ಜೀನಿಯಾ ರಾಜ್ಯದ ರಿಚ್ಮಂಡ್ ನಗರಕ್ಕೆ ಪ್ರಯಾಣ ಬೆಳೆಸಲಿದ್ದಾರೆ.





