Light
Dark

ವಾಯುಮಾಲಿನ್ಯ ನಿಗೂಢ ಕೊಲೆಗಾರ, ಇದರಿಂದ ಜನರ ಆರೋಗ್ಯ, ದೇಶದ ಆರ್ಥಿಕತೆ ಮೇಲೆ ಪರಿಣಾಮ: ಕೇರಳ ಹೈಕೋರ್ಟ್

ತಿರುವನಂತಪುರಂ: ವಾಯುಮಾಲಿನ್ಯದ ಗಂಭೀರತೆಯನ್ನು ಒತ್ತಿ ಹೇಳಿರುವ ಕೇರಳ ಹೈಕೋರ್ಟ್‌ ಅದನ್ನು ನಿಯಂತ್ರಸದೇ ಹೋದರೆ ಸಾರ್ವಜನಿಕ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಹೇಳಿದೆ.

ಆರೋಗ್ಯದ ಮೇಲಷ್ಟೇ ಅಲ್ಲದೆ, ವಾಯು ಮಾಲಿನ್ಯ ರಾಷ್ಟ್ರದ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತದೆ ಎಂದು ನ್ಯಾಯಮೂರ್ತಿ ಎನ್ ನಗರೇಶ್ ತಿಳಿಸಿದರು.

ವಾಯುಮಾಲಿನ್ಯ ನಿಗೂಢ ಕೊಲೆಗಾರ. ಭಾರತದಲ್ಲಿ ವಾಯು ಮಾಲಿನ್ಯದ ಪ್ರಮಾಣ ಹೆಚ್ಚು ಎನ್ನಲಾಗುತ್ತಿದೆ. ಧೂಳಿನ ಕಣಗಳಿಗೆ ಒಡ್ಡಿಕೊಳ್ಳುವುದರಿಂದ ಶ್ವಾಸಕೋಶದ ಕ್ಯಾನ್ಸರ್, ಪಾರ್ಶ್ವವಾಯು ಹಾಗೂ ಹೃದ್ರೋಗದಂತಹ ಮಾರಣಾಂತಿಕ ಕಾಯಿಲೆಗಳು ಉಂಟಾಗಬಹುದು. ಮಾಲಿನ್ಯದ ಆರೋಗ್ಯದ ಪರಿಣಾಮಗಳು ರಾಷ್ಟ್ರದ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತವೆ. ಕೃಷಿ, ಕೈಗಾರಿಕೆ, ವಿದ್ಯುತ್, ಮನೆಗಳು ಮತ್ತು ಸಾರಿಗೆಯಂತಹ ಕ್ಷೇತ್ರಗಳು ದೂಳಿನ ಕಣ ಹೆಚ್ಚಲು ಕಾರಣ ಎಂದು ನ್ಯಾಯಾಲಯ ಹೇಳಿದೆ.

ಸಂವಿಧಾನದ 47ನೇ ವಿಧಿಯಲ್ಲಿ ಸೂಚಿಸಲಾದ ರಾಜ್ಯ ನಿರ್ದೇಶಕ ತತ್ವ ಈಡೇರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಬಹು-ವಲಯ ಮತ್ತು ಬಹು-ನ್ಯಾಯವ್ಯಾಪ್ತಿ ಮಟ್ಟದಲ್ಲಿ ಸಮಸ್ಯೆ ನಿಭಾಯಿಸುವುದು ಅವಶ್ಯಕ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಕೇಂದ್ರ ಸರ್ಕಾರದಿಂದ ಲಿಖಿತವಾಗಿ ಯಾವುದೇ ನಿರ್ದಿಷ್ಟ ನಿರ್ದೇಶನವಿಲ್ಲದೆ ಡೀಸೆಲ್ ಜನರೇಟರ್ ಸೆಟ್‌ಗಳ ಬಳಕೆ ಮೇಲೆ ಯಾವುದೇ ನಿರ್ಬಂಧಿತ ಆದೇಶಗಳನ್ನು ಜಾರಿಗೊಳಿಸದಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿರ್ದೇಶನ ನೀಡುವಂತೆ ಕೋರಿ ಟೆಲಿಕಾಂ ಸೇವಾ ಪೂರೈಕೆದಾರ, ವೊಡಾಫೋನ್ ಐಡಿಯಾ ಮಾಡಿದ ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ವೊಡಾಫೋನ್ ಐಡಿಯಾದ ಟೆಲಿಕಾಂ ಟವರ್‌ಗಳ ಎನರ್ಜಿ ಸ್ವಿಚಿಂಗ್ ಕೇಂದ್ರಗಳಲ್ಲಿ ಬಳಸಲಾದ ಬ್ಯಾಕ್‌ಅಪ್ ಡೀಸೆಲ್ ಜನರೇಟರ್‌ಗಳನ್ನು 1981ರ ವಾಯು ಮಾಲಿನ್ಯ (ತಡೆ ಮತ್ತು ನಿಯಂತ್ರಣ) ಕಾಯಿದೆಯ ಸೆಕ್ಷನ್ 21ರ ಅಡಿಯಲ್ಲಿ ಕೈಗಾರಿಕಾ ಸ್ಥಾವರ ಎಂದು ಪರಿಗಣಿಸದಂತೆ ವೊಡಾಫೋನ್‌ ವಾದಿಸಿತ್ತು. ಆದರೆ ಇವುಗಳಿಂದ ಭಾರಿ ಪ್ರಮಾಣದಲ್ಲಿ ವಾಯುಮಾಲಿನ್ಯ ಉಂಟಾಗುತ್ತಿದೆ ಎಂಬುದು ಮಾಲಿನ್ಯ ನಿಯಂತ್ರಣ ಮಂಡಳಿಯ ವಾದವಾಗಿದೆ. ಮಂಡಳಿಯ ವಾದವನ್ನು ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಬೆಂಬಲಿಸಿತು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ