ಮುಂಬೈ: ಮುಂಬೈನಿಂದ ನ್ಯೂಯಾರ್ಕ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಭದ್ರತಾ ಬೆದರಿಕೆ ಬಂದಿದ್ದು, ವಿಮಾನದ ಶೌಚಾಲಯವೊಂದರಲ್ಲಿ ಬಾಂಬ್ ಬೆದರಿಕೆ ಪತ್ರ ಲಭ್ಯವಾಗಿದೆ. ಈ ಹಿನ್ನೆಲೆ ವಿಮಾನವನ್ನು ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ವಾಪಾಸ್ ಬಂದು ಲ್ಯಾಂಡ್ ಆಗಿದೆ.
ಏರ್ ಇಂಡಿಯಾ ವಿಮಾನವೂ ಇಂದು(ಮಾರ್ಚ್.10) ಮುಂಬೈನಿಂದ ನ್ಯೂಯಾರ್ಕ್‌ಗೆ ಹಾರಾಟ ನಡೆಸುತ್ತಿದ್ದ ವೇಳೆ ಮಾರ್ಗ ಮಧ್ಯದಲ್ಲಿ ಸಂಭಾವ್ಯ ಭದ್ರತಾ ಬೆದರಿಕೆಯನ್ನು ಪತ್ತೆಹಚ್ಚಲಾಯಿತು. ಅಗತ್ಯ ಶಿಷ್ಟಾಚಾರಗಳನ್ನು ಅನುಸರಿಸಿದ ಬಳಿಕ ವಿಮಾನದಲ್ಲಿದ್ದ ಎಲ್ಲರ ಸುರಕ್ಷತೆ ಹಾಗೂ ಭದ್ರತೆಯ ಹಿತದೃಷ್ಟಿಯಿಂದ ವಿಮಾನವು ಮುಂಬೈಗೆ ಹಿಂತಿರುಗಿಸಲಾಗಿದೆ. ಅಲ್ಲದೇ ಈ ಘಟನೆಯ ಮುನ್ನ ಅಗತ್ಯವಿರುವ ಎಲ್ಲಾ ಶಿಷ್ಟಾಚಾರಗಳನ್ನು ಅನುಸರಿಸಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ.
ವಿಮಾನವನ್ನು ಇಂದು ಬೆಳಿಗ್ಗೆ 10.25 ಗಂಟೆಗೆ ಮುಂಬೈ ಏರ್‌ಪೋರ್ಟ್‌ನಲ್ಲಿ ಸುರಕ್ಷಿತವಾಗಿ ಇಳಿಸಲಾಗಿದೆ. ನಂತರ ವಿಮಾನವನ್ನು ಭದ್ರತಾ ಸಂಸ್ಥೆಗಳಿಂದ ಕಡ್ಡಾಯ ತಪಾಸಣೆಗೆ ಒಳಪಡಿಸಲಾಗಿದೆ. ಹೀಗಾಗಿ ರ್ ಇಂಡಿಯಾ ಅಧಿಕಾರಿಗಳಿಗೆ ತನ್ನ ಸಂಪೂರ್ಣ ಸಹಕಾರವನ್ನು ನೀಡುತ್ತಿದೆ ಎಂದು ಏರ್ ಇಂಡಿಯಾ ವಕ್ತಾರರು ಮಾಹಿತಿ ನೀಡಿದ್ದಾರೆ.
ಇನ್ನು ವಿಮಾನದ ವೇಳಾಪಟ್ಟಿಯಲ್ಲಿ ಈ ವಿಮಾನಯಾನಕ್ಕೆ ಮಾರ್ಚ್.11 ರಂದು ಬೆಳಿಗ್ಗೆ 5 ಗಂಟೆಗೆ ತೆರಳಲು ಮರು ನಿಗದಿಪಡಿಸಲಾಗಿದೆ. ಅಲ್ಲಿಯವರೆಗೂ ಎಲ್ಲಾ ಪ್ರಯಾಣಿಕರಿಗೂ ಹೋಟೆಲ್ ವಸತಿ, ಊಟ ಹಾಗೂ ಇತರೆ ಸಹಾಯವನ್ನು ನೀಡಲಾಗುತ್ತದೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.





