Mysore
30
few clouds

Social Media

ಶುಕ್ರವಾರ, 24 ಏಪ್ರಿಲ 2026
Light
Dark

ಮಿರ್ಜಾಪುರದಲ್ಲಿ ಸರಣಿ ಅಪಘಾತ: 11 ಮಂದಿ ಸಾವು

ಮಿರ್ಜಾಪುರ (ಉತ್ತರ ಪ್ರದೇಶ): ಬಹು ವಾಹನಗಳು ಡಿಕ್ಕಿಯಾಗಿ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಮಕ್ಕಳು ಸೇರಿದಂತೆ 11 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲಾ ಕೇಂದ್ರ ಕಚೇರಿಯಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಡ್ರಾಮಂಡ್‍ಗಂಜ್ ಕಣಿವೆಯಿಂದ ಲಸೋಡಾ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ-135 ರ ವ್ಯಾಪ್ತಿಯಲ್ಲಿ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆ ಪ್ರಕಾರ, ಚಲಿಸುತ್ತಿದ್ದ ಟ್ರಕ್‍ನ ಬ್ರೇಕ್ ವೈಫಲ್ಯವಾಗಿದ್ದರಿಂದ ನಿಯಂತ್ರಣ ತಪ್ಪಿ ಮುಂದೆ ಚಲಿಸುತ್ತಿದ್ದ ಮತ್ತೊಂದು ಟ್ರಕ್‍ಗೆ ಡಿಕ್ಕಿ ಹೊಡೆದಿದೆ ಎಂದು ಶಂಕಿಸಲಾಗಿದೆ.

ಡಿಕ್ಕಿಯ ರಭಸಕ್ಕೆ ಎರಡು ಟ್ರಕ್‍ಗಳ ನಡುವೆ ಪ್ರಯಾಣಿಸುತ್ತಿದ್ದ ಕಾರು ನಜ್ಜುಗುಜ್ಜಾಯಿತು. ನಂತರ ಹಲವು ವಾಹನಕ್ಕೆ ಡಿಕ್ಕಿಯಾಗಿದೆ.

ಇದೇ ವೇಳೆ ಕಾರೊಂದು ಬೆಂಕಿಗೆ ಆಹುತಿಯಾಗಿದೆ. ಸ್ಥಳೀಯರೊಂದಿಗೆ ಪೊಲೀಸರು ಜಖಂಗೊಂಡ ವಾಹನಗಳಲ್ಲಿ ಸಿಲುಕಿಕೊಂಡಿದ್ದ ಜನರನ್ನು ಹೊರತೆಗೆದರು. ಇದುವರೆಗೂ 11 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿವೆ ಎಂದು ಎಸ್ಪಿ ಕೌಶಿಕ್ ಹೇಳಿದರು.

ಜಿಲ್ಲಾಧಿಕಾರಿ ಪವನ್ ಗಂಗ್ವಾರ್ ಪಿಟಿಐಗೆ ಮಾಹಿತಿ ನೀಡಿ, ಮೃತರಲ್ಲಿ ಏಳು ಮಂದಿ ಮಿರ್ಜಾಪುರ ಜಿಲ್ಲೆಯವರು, ಮೂವರು ಮಧ್ಯಪ್ರದೇಶದವರು ಮತ್ತು ಒಬ್ಬರು ನೆರೆಯ ಸೋನ್‍ಭದ್ರ ಜಿಲ್ಲೆಯವರು ಎಂದು ತಿಳಿಸಿದ್ದಾರೆ.

ಮೃತರನ್ನು ಮಿರ್ಜಾಪುರದ ಜಿಗ್ನಾ ಪ್ರದೇಶದ ಶಿವ ಸಿಂಗ್ (8), ಸೋನಮ್ ಸಿಂಗ್ (9), ಪಿಯೂಷ್ ಸಿಂಗ್ (14), ಪಂಕಜ್ ಸಿಂಗ್ (40), ವಂದನಾ ಸಿಂಗ್ (43), ವಿಷ್ಣು ಸಿಂಗ್ (45) ಮತ್ತು ವೀಣಾ ಸಿಂಗ್ (47) ಹಾಗೂ ಮಧ್ಯಪ್ರದೇಶದ ಸತ್ನಾದ ಕಾರ್ತಿಕೇಯ ಸಿಂಗ್ (18), ಪ್ರಿಯಾಂಕಾ ಸಿಂಗ್ (42), ಸಾಗರ್‍ನ ವಿಕಾಸ್? ಶರ್ಮಾ (32) ಮತ್ತು ಸೋನ್‍ಭದ್ರದ ಜೈ ಪ್ರಕಾಶ್ (27) ಎಂದು ಗುರುತಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತದಲ್ಲಿ ಸಿಲುಕಿರುವ ವಾಹನಗಳಲ್ಲಿ ಬಿಹಾರ ನೋಂದಣಿ ಸಂಖ್ಯೆಯನ್ನು ಹೊಂದಿರುವ ಟ್ರಕ್ ಮತ್ತು ಮಧ್ಯಪ್ರದೇಶದಲ್ಲಿ ನೋಂದಾಯಿಸಲಾದ ಇನ್ನೊಂದು ಟ್ರಕ್ ಸೇರಿವೆ.

 

Tags:
error: Content is protected !!