ರಾಯ್‌ಪುರ: ಭದ್ರತಾ ಸಿಬ್ಬಂದಿಯಿದ್ದ ವಾಹನವನ್ನು ನಕ್ಸಲರು ಸುಧಾರಿತ ಸ್ಫೋಟಕ ಸಾಧನ ಬಳಸಿ ಸ್ಫೋಟಿಸಿದ ಪರಿಣಾಮ ಓರ್ವ ಚಾಲಕ ಸೇರಿದಂತೆ 8 ಮಂದಿ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆ ಮುಗಿಸಿ ಹಿಂದಿರುಗುವ ವೇಳೆ ಛತ್ತೀಸ್‌ಗಢ್ ಬೀಜಾಪುರ್ ಜಿಲ್ಲೆಯ ಬೇದ್ರೆ-ಕುತ್ರು ರಸ್ತೆಯಲ್ಲಿ ಭದ್ರತೆ ಪಡೆಯ ವಾಹನವನ್ನು ನಕ್ಸಲರು ಸ್ಫೋಟಿಸಿದ್ದಾರೆ.
ಒಂದು ದಿನದ ಹಿಂದೆಯಷ್ಟೇ ಛತ್ತೀಸ್‌ಗಢದ ಬಸ್ತಾರ್ ಪ್ರದೇಶದಲ್ಲಿ ನಕ್ಸಲರು ಹಾಗೂ ಭದ್ರತಾ ಪಡೆಗಳ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ನಾಲ್ವರು ನಕ್ಸಲರು ಹಾಗೂ ಒಬ್ಬ ಹೆಡ್ ಕಾನ್ಸ್‌ಟೇಬಲ್ ಮೃತಪಟ್ಟಿದ್ದರು.
ಗುಂಡಿನ ದಾಳಿ ನಡೆಸಿದ ಬಳಿಕ ನಾಲ್ವರು ನಕ್ಸಲರ ಮೃತದೇಹ ಮತ್ತು AK-47 ರೈಫಲ್ ಹಾಗೂ ಸ್ವಯಂ ಲೋಡಿಂಗ್ ರೈಫಲ್ (SLR) ಸೇರಿದಂತೆ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದಾದ ಒಂದು ದಿನದ ನಂತರ ನಕ್ಸಲರು ಪ್ರತಿದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.