ಹೊಸದಿಲ್ಲಿ : ಎಲ್‌ಪಿಜಿ ಕೊರತೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಹೋಟೆಲ್, ರೆಸ್ಟೋರೆಂಟ್ ಮತ್ತು ಆಹಾರ ಸಂಸ್ಕರಣಾ ಘಟಕಗಳಿಗೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಗುಡ್‌ನ್ಯೂಸ್ ನೀಡಿದೆ.
ಎಲ್‌ಪಿಜಿ ಉತ್ಪಾದನೆಯಲ್ಲಿ ಹೆಚ್ಚಳವಾಗಿರುವುದರಿಂದ ರಾಜ್ಯಗಳಿಗೆ ಹೆಚ್ಚುವರಿಯಾಗಿ ವಾಣಿಜ್ಯ ಬಳಕೆಗೆ ಶೇ.20ರಷ್ಟು ಅನಿಲ ಹಂಚಿಕೆ ಮಾಡಲು ಕೇಂದ್ರ ಸರ್ಕಾರ ಆದೇಶಿಸಿದೆ. ಇದರಿಂದ ಒಟ್ಟು ಹಂಚಿಕೆ ಪ್ರಮಾಣ ಶೇಕಾಡ 50ರ ಮಟ್ಟಕ್ಕೆ ತಲುಪಲಿದೆ. ಮಾರ್ಚ್ 23ರಿಂದ ಇದು (ಸೋಮವಾರ) ಜಾರಿಗೆ ಬರಲಿದೆ.
ಹೆಚ್ಚುವರಿ ಅನಿಲವನ್ನು ಪ್ರಮುಖವಾಗಿ ರೆಸ್ಟೋರೆಂಟ್, ಢಾಬಾ, ಹೋಟೆಲ್, ಕೈಗಾರಿಕಾ ಕ್ಯಾಂಟೀನ್, ಆಹಾರ ಸಂಸ್ಕರಣೆ ಮತ್ತು ಡೈರಿ ಕ್ಷೇತ್ರಗಳಿಗೆ ಆದ್ಯತೆಯ ಮೇಲೆ ನೀಡಲು ಸೂಚಿಸಲಾಗಿದೆ. ರಾಜ್ಯ ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಗಳು ನಡೆಸುವ ಸಬ್ಸಿಡಿ ಊಟದ ಕೇಂದ್ರಗಳು ಮತ್ತು ಸಮುದಾಯ ಅಡುಗೆ ಮನೆಗಳಿಗೆ ತಡೆರಹಿತ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ.
ವಲಸೆ ಕಾರ್ಮಿಕರ ಹಿತದೃಷ್ಟಿಯಿಂದ ಅವರಿಗೆ 5 ಕೆಜಿ ಸಣ್ಣ ಸಿಲಿಂಡರ್ ಒದಗಿಸುವ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಹೆಚ್ಚುವರಿ ಅನುದಾನವು ಕೇವಲ ನಿಗದಿಪಡಿಸಿದ ವಲಯಗಳಿಗೆ ತಲುಪುವಂತೆ ನೋಡಿಕೊಳ್ಳಲು ಮತ್ತು ಕಾಳಸಂತೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೆಟ್ರೋಲಿಯಂ ಇಲಾಖೆ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಗೃಹಬಳಕೆ ಎಲ್‌ಪಿಜಿ ಪೂರೈಕೆ ಸ್ಥಿರವಾಗಿದೆ. ವಿತರಕರಲ್ಲಿ ಯಾವುದೇ ಕೊರತೆ ಇಲ್ಲ. ಜತೆಗೆ ಪ್ಯಾನಿಕ್ ಬುಕಿಂಗ್‌ಗಳು ಕಡಿಮೆಯಾಗಿದ್ದು, ನಾಗರಿಕರು ವಿರತಣಾ ಕೇಂದ್ರಗಳ ಮುಂದೆ ಜಮಾಯಿಸದೇ ಮನೆ ವಿತರಣೆಯನ್ನು ಅವಲಂಬಿಸುವಂತೆ ಅವರು ಸೂಚಿಸಿದ್ದಾರೆ.





