ಅಮೃತಸರ: ಪಂಜಾಬ್‌ನ ಅಮೃತಸರದ ಐದು ಗ್ರಾಮಗಳಲ್ಲಿ ನಕಲಿ ಮದ್ಯ ಸೇವಿಸಿ 14 ಜನರು ಸಾವನ್ನಪ್ಪಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ.
ಅಸ್ವಸ್ಥರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪ್ರಕರಣ ಸಂಬಂಧ ಐವರನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಭಂಗಲಿ, ಪಾತಾಳಪುರಿ, ಮರಾರಿ ಕಲಾನ್, ಥೆರೆವಾಲ್ ಮತ್ತು ತಲ್ವಾಂಡಿ ಘುಮಾನ್ ಎಂಬ ಐದು ಗ್ರಾಮಗಳಲ್ಲಿ ಸಾವುಗಳು ಸಂಭವಿಸಿದೆ.
ಘಟನೆ ತಿಳಿದ ಕೂಡಲೇ ಮದ್ಯ ಸೇವಿಸಿದ ಮತ್ತು ಅನಾರೋಗ್ಯದಿಂದ ಬಳಲುತ್ತಿರುವವರನ್ನು ಚಿಕಿತ್ಸೆಗೆ ಕಳುಹಿಸಿ ಎಂದು ಗುರುದ್ವಾರಗಳಲ್ಲಿ ಘೋಷಣೆ ಮಾಡಲಾಯಿತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಘಟನಾ ಸ್ಥಳದಲ್ಲಿ ಅಧಿಕಾರಿಗಳು ಬೀಡುಬಿಟ್ಟಿದ್ದು, ಅಸ್ವಸ್ಥರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.



