Mysore
34
scattered clouds

Social Media

ಶುಕ್ರವಾರ, 28 ಮಾರ್ಚ್ 2025
Light
Dark

ಉಗ್ರ ಚಟುವಟಿಕೆಯಲ್ಲಿ ತೊಡಗಿದ್ದ ಮೂವರು ಐಸಿಸ್ ಸದಸ್ಯರನ್ನು ಬಂಧಿಸಿದ ಎನ್ಐಎ

ಇಸ್ಲಾಮಿಕ್ ಸ್ಟೇಟ್  ಉಗ್ರ ಚಟುವಟಿಕೆಯಲ್ಲಿ ತೊಡಗಿದ್ದ ಮೂವರನ್ನು ರಾಷ್ಟೀಯ ತನಿಖಾ ಸಂಸ್ಥೆ  ಬಂಧಿಸಿದೆ. ನವದೆಹಲಿಯ ಬಾಟ್ಲಾ ಹೌಸ್​​ನಲ್ಲಿ ಶೋಧ ನಡೆಸಿದ ನಂತರ ಇವರನ್ನು ಬಂಧಿಸಲಾಗಿದೆ ಎಂದು ಎನ್ಐಎ ಹೇಳಿದೆ. ಶಂಕಿತ ಆರೋಪಿ ಮೊಹಸಿನ್ ಅಹ್ಮದ್ ಎಂಬಾತನನ್ನು ಶನಿವಾರ ಬಂಧಿಸಲಾಗಿದೆ ಎಂದು ಎನ್ಐಎ ಹೇಳಿದೆ. ತನಿಖಾ ಸಂಸ್ಥೆಯ ಪ್ರಕಾರ, ಅಹ್ಮದ್  ಪಟನಾ ನಿವಾಸಿಯಾಗಿದ್ದು ಈತ ಐಸಿಸ್​​ನ ಸಕ್ರಿಯ ಸದಸ್ಯ. ಭಾರತದಲ್ಲಿ ಮತ್ತು ವಿದೇಶಗಳಿಂದ ಐಸಿಸ್ ಒಲವುಳ್ಳ ಜನರಿಂದ ನಿಧಿ ಸಂಗ್ರಹಿಸುವ ಕಾರ್ಯದಲ್ಲಿ ಈತ ಭಾಗಿಯಾಗಿದ್ದ ಎಂದು ಎನ್ಐಎ ಹೇಳಿದೆ. ಈತ ಈ ಹಣವನ್ನು ಐಸಿಸ್ ಚಟುವಟಿಕೆಗಾಗಿ ಕ್ರಿಪ್ಟೋಕರೆನ್ಸಿ ರೂಪದಲ್ಲಿ ಸಿರಿಯಾ ಮತ್ತು ಇತರ ಪ್ರದೇಶಗಳಿಗೆ ಕಳುಹಿಸುತ್ತಿದ್ದ ಎಂದು ಎನ್ಐಎ ಹೇಳಿದೆ. ಶನಿವಾರ ಆರೋಪಿ ಮೊಹಸಿನ್ ಅಹ್ಮದ್ ಪ್ರಸ್ತುತ ವಾಸಿಸುತ್ತಿರುವ ಬಾಟ್ಲಾ ಹೌಸ್ ಆವರಣದಲ್ಲಿ ಎನ್ಐಎ ಶೋಧ ನಡೆಸಿ ಆತನನ್ನು ಬಂಧಿಸಿತ್ತು. ಈತ ಐಸಿಸ್ ನಲ್ಲಿ ಆನ್ ಲೈನ್ ಮತ್ತು ಆಫ್ ಲೈನ್ ನಲ್ಲಿ ತೊಡಗಿಸಿಕೊಂಡಿದ್ದ. ಜೂನ್ 25ರಂದು ಎನ್ಐಎ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದು, ತನಿಖೆ ಪ್ರಗತಿಯಲ್ಲಿದೆ.

ವಾರದ ಹಿಂದೆ ಐಸಿಸ್ ಜತೆ ಸಂಪರ್ಕವಿದೆ ಎಂದು ಮೂವರು ಶಂಕಿತ ಆರೋಪಿಗಳನ್ನು ಎನ್ಐಎ ಕರ್ನಾಟಕದಿಂದ ಬಂಧಿಸಿತ್ತು. ಕಳೆದ ಭಾನುವಾರ ಉಗ್ರ ನಿಗ್ರಹ ದಳ ದೇಶದಾದ್ಯಂತ ದಾಳಿ ನಡೆಸಿತ್ತು. ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮತ್ತು ತುಮಕೂರಿನ ಎರಡು ಪ್ರದೇಶಗಳಲ್ಲಿ ಎನ್ಐಎ ದಾಳಿ ನಡೆಸಿ ಮೂವರನ್ನು ವಶಕ್ಕೆ ತೆಗೆದುಕೊಂಡಿತ್ತು. ಈ ಎರಡು ಪ್ರಕರಣಗಳಲ್ಲಿ ಎನ್ಐಎ ಸ್ಥಳೀಯ ಪೊಲೀಸರ ಸಹಾಯ ಪಡೆದಿತ್ತು ಎಂದು ರಾಜ್ಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಈ ಪೈಕಿ ಸಾಜಿದ್ ಮಕ್ರಾನಿ ಮಹಾರಾಷ್ಟ್ರ ಮೂಲದವನಾಗಿದ್ದು, ತುಮಕೂರಿನಲ್ಲಿರುವ ಯುನಾನಿ ಕಾಲೇಜಿನ ಮೂರನೇ ವರ್ಷ ವಿದ್ಯಾರ್ಥಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಐಸಿಸ್ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಮಧ್ಯಪ್ರದೇಶ, ಗುಜರಾತ್, ಬಿಹಾರ ಕರ್ನಾಟಕ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ಸೇರಿದಂತೆ ಆರು ರಾಜ್ಯಗಳಲ್ಲಿ ಶಂಕಿತರ 13 ಸ್ಥಳಗಳಲ್ಲಿ ಸಂಸ್ಥೆ ಶೋಧ ನಡೆಸಿತ್ತು. ಜೂನ್ 25 ರಂದು ಐಪಿಸಿಯ ಸೆಕ್ಷನ್ 153 ಎ, ಮತ್ತು 153 ಬಿ ಮತ್ತು ಯುಎ (ಪಿ) ಕಾಯ್ದೆಯ ಸೆಕ್ಷನ್ 18, 18 ಬಿ, 38, 39 ಮತ್ತು 40 ಅಡಿಯಲ್ಲಿ ಎನ್‌ಐಎ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ