ಭೂಮಿ ಕಳೆದುಕೊಳ್ಳುತ್ತಿರುವ ರೈತಾಪಿಯ ಕಣ್ತೆರೆಸುವ ಪ್ರಯತ್ನ
ನಾ. ದಿವಾಕರ
ಭಾರತದಂತಹ ಕೃಷಿ ಪ್ರಧಾನ ಹಾಗೂ ಸಾಮಾಜಿಕವಾಗಿ ಹಿಂದುಳಿದ, ಆರ್ಥಿಕವಾಗಿ ಬೆಳವಣಿಗೆಯ ಹಾದಿಯಲ್ಲಿರುವ ದೇಶದಲ್ಲಿ, ಬಹುಸಂಖ್ಯಾತ ಮನುಷ್ಯ ಸಮಾಜದ ಬದುಕು ಮತ್ತು ಜೀವನೋಪಾಯಕ್ಕೆ ಅಡಿಪಾಯವಾಗಿ ಪರಿಣಮಿಸುವ ‘ಭೂಮಿ’ ಸದಾ ಚರ್ಚೆಯಲ್ಲಿರುವ ಪ್ರಶ್ನೆಯಾಗಿರುತ್ತದೆ.
ನವ ಉದಾರವಾದದ ಜಗತ್ತಿನಲ್ಲಿ
ಈ ನಡುವೆಯೇ ಡಿಜಿಟಲ್ ಯುಗದ ಬಂಡ ವಾಳಶಾಹಿ-ನವ ಉದಾರವಾದಿ ಆರ್ಥಿಕತೆಯ ಪರಿಣಾಮವಾಗಿ ಭಾರತದ ಕೃಷಿ ವಲಯ ಹಲವು ಆಯಾಮಗಳ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಶೇ. ೮೬ರಷ್ಟು ಸಣ್ಣ-ಅತಿಸಣ್ಣ ರೈತರನ್ನೊಳಗೊಂಡ ಭಾರತದ ಕೃಷಿ ವಲಯ ಉತ್ಪಾದನೆಯಲ್ಲಿ ಏರುಗತಿ ಯಲ್ಲಿದ್ದರೂ, ಉತ್ಪಾದಕ ಶಕ್ತಿಗಳು, ಅಂದರೆ ರೈತಾಪಿ ವರ್ಗದ ಜೀವನ ದಿನದಿಂದ ದಿನಕ್ಕೆ ಅಧೋಗತಿಯತ್ತ ಸಾಗುತ್ತಿದೆ. ಇದಕ್ಕೆ ಸರ್ಕಾರಗಳ ಕೃಷಿ ನೀತಿಗಳು ಮತ್ತು ಕಾರ್ಪೊರೇಟ್ ಮಾರುಕಟ್ಟೆಯ ದಬ್ಬಾಳಿಕೆ ಒಂದು ಕಾರಣವಾದರೆ ಮತ್ತೊಂದು ಕಾರಣ ರೈತ ಬೆಳೆದ ಫಸಲಿಗೆ ಸೂಕ್ತ ಬೆಲೆ ದೊರೆಯದೆ ಇರುವುದು. ಕಳೆದ ಮೂರು ದಶಕಗಳಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಲಕ್ಷಾಂತರ ರೈತರಲ್ಲಿ ಇದನ್ನು ಗುರುತಿಸಬಹುದು. ಭೂಮಿಯನ್ನೇ ನಂಬಿ ಬದುಕುವ ಮತ್ತೊಂದು ವರ್ಗ, ಆದಿವಾಸಿ ಬುಡಕಟ್ಟು ಸಮುದಾಯಗಳು, ಇದೇ ಆರ್ಥಿಕ ನೀತಿಗಳ ಪರಿಣಾಮವಾಗಿ ತಮ್ಮ ಬದುಕಿನ ಅಡಿಪಾಯವನ್ನೇ ಕಳೆದುಕೊಳ್ಳುತ್ತಿರುವುದು ಮತ್ತೊಂದು ಸಮಸ್ಯೆಯಾಗಿದೆ.
ಈ ಎರಡೂ ಮಜಲುಗಳಲ್ಲಿ ನೋಡಿದಾಗ ಭಾರತದಲ್ಲಿ ಭೂಮಿ ಪ್ರಶ್ನೆಯ ಮೂಲ ಧಾತು ಯಾವುದು ಎಂದು ಯೋಚಿಸುವ ಅವಶ್ಯಕತೆ ಎದ್ದು ಕಾಣು ತ್ತದೆ. ನಗರೀಕರಣಕ್ಕೊಳಗಾದ ಭಾರತದ ಸುಶಿಕ್ಷಿತ, ಹಿತವಲಯದ ಮಧ್ಯಮ ವರ್ಗಗಳು, ‘ಭೂಮಿ ಪ್ರಶ್ನೆಗೂ ನಮಗೂ ಸಂಬಂಧವೇ ಇಲ್ಲ’ ಎಂಬ ಧೋರಣೆ ಯಲ್ಲಿ ನವ ಉದಾರವಾದದ ಫಲಾನುಭವಿಗಳಾಗುತ್ತಿದ್ದಾರೆ. ದಲಿತ- ತಳಸಮುದಾಯಗಳ ಹೋರಾಟಗಳೂ ಭೂ ಹೋರಾಟಗಳಿಂದ ವಿಮುಖ ವಾಗಿರುವುದು ಈ ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಕೃಷಿ ವಿದ್ಯಮಾನದ ಸುತ್ತಲಿನ ಚರಿತ್ರೆ ಮತ್ತು ವರ್ತಮಾನದ ಸ್ಥಿತಿಗತಿಗಳನ್ನು ವಿಶಾಲ ಸಮಾಜದ ಮುಂದಿಡುವ ಬಹುದೊಡ್ಡ ಜವಾಬ್ದಾರಿಯನ್ನು ‘ಭೂ ಸ್ವಾಧೀನ ಒಳಸುಳಿಗಳು’ ಎಂಬ ಹೊತ್ತಿಗೆ ನೆರವೇರಿಸುತ್ತಿದೆ.
ಭೂ ಸ್ವಾಧಿನ ಪ್ರಕ್ರಿಯೆಯ ಒಳಹೊರಗು. . .
‘ನಮ್ಮ ಭೂಮಿ ನಮಗಿರಲಿ ಅನ್ಯರಿಗಲ್ಲ’ ಎಂಬ ಘೋಷ ವಾಕ್ಯದಡಿಯಲ್ಲಿ ಹೊರತಂದಿರುವ ‘ಭೂ ಸ್ವಾಧೀನ ಒಳಸುಳಿಗಳು’ ಸಮಾಜದ ಕಣ್ತೆರೆಸುವ ಮಹತ್ತರ ಗ್ರಂಥವಾಗಿ ಕಾಣುತ್ತದೆ. ‘ಭರವಸೆಯ ಬೆಳಕಿನ ಜಾಡು ಹಿಡಿದು’ ಎಂಬ ಉಪಶೀರ್ಷಿಕೆಯೊಡನೆ ಸಮಾಜದ ಮುಂದಿರುವ ಈ ಗ್ರಂಥವನ್ನು ಸಮಾಜಶಾಸ್ತ್ರೀಯ ನೆಲೆಯಲ್ಲಿ, ರಾಜಕೀಯ ಚೌಕಟ್ಟುಗಳೊಳಗೆ, ಆರ್ಥಿಕ ಆವರಣದಲ್ಲಿಟ್ಟು ಓದಿದಾಗ, ನಮಗೆ ಭೂಮಿ ಮತ್ತು ಮನುಷ್ಯ ಸಮಾಜದ ನಡುವಿನ ಸೂಕ್ಷ್ಮ ಸಂಬಂಧಗಳು ಅರ್ಥವಾಗಲು ಸಾಧ್ಯ.
ಒಂದು ಸಂಶೋಧಕ-ಸಾಹಿತ್ಯಕ ಬೌದ್ಧಿಕ ಪರಿಶ್ರಮವನ್ನು ಸಾಮೂಹಿಕವಾಗಿ ಸಮಾಜದ ಮುಂದಿಡುವ ವಿಧಾನವೇ ಬಹುಶಃ ಹೊಸತು ಅನಿಸುತ್ತದೆ. ‘ಭೂ ಸ್ವಾಧೀನದ… ’ ಪುಸ್ತಕವು ಇದನ್ನು ಆಗುಮಾಡಿದೆ. ವಿವಿಧ ಕಾರ್ಯಕರ್ತರ, ಕೃಷಿ ತಜ್ಞರ, ಅರ್ಥಶಾಸ್ತ್ರಜ್ಞರ, ಸಮಾಜ ಶಾಸ್ತ್ರಜ್ಞರ ಅಧ್ಯಯನ, ಅರಿವು ಮತ್ತು ಅಭಿವ್ಯಕ್ತಿಗಳನ್ನು ಒಂದುಗೂಡಿಸಿ ಹೊರತಂದಿರುವ ಈ ಕೃತಿಯ ಎಂಟು ಅಧ್ಯಾಯಗಳು ಮತ್ತು ಎಂಟು ಅನುಬಂಧಗಳು ಕೇವಲ ಸರ್ಕಾರಗಳು ಜಾರಿಗೊಳಿಸಿರುವ ರೈತ-ಜನವಿರೋಽ ಕಾಯ್ದೆಗಳನ್ನು ಪರಿಚಯಿಸುವುದಷ್ಟೇ ಅಲ್ಲದೆ, ಅದರ ಹಿಂದಿನ ಉದ್ದೇಶಗಳನ್ನೂ ಓದುಗರ ಮುಂದಿಡುತ್ತವೆ.
ಕೃತಿಯ ಮಹತ್ವ ಮತ್ತು ಉಪಯುಕ್ತತೆ. . .
‘ಭೂ ಸ್ವಾಧೀನ. . . ’ ಕೃತಿಯು ಸ್ವತಂತ್ರ ಭಾರತದ ಸರ್ಕಾರಗಳ ಭೂ ಸ್ವಾಧೀನ ಕಾಯ್ದೆಗಳು ರೈತಾಪಿಯ ಬದುಕನ್ನು ಹೇಗೆ ದುಸ್ತರಗೊಳಿಸಿವೆ ಎನ್ನುವುದನ್ನು ಕಾನೂನಾತ್ಮಕ ನೆಲೆಯಲ್ಲಿ ವಿವರಿಸುವುದರೊಂದಿಗೇ (ಅಧ್ಯಾಯ ೧) ರೈತರ ಭೂಮಿಯನ್ನು ಕಸಿದುಕೊಳ್ಳಲು ರೂಪಿಸಲಾಗಿರುವ ಸಾಂಸ್ಥಿಕ ಚೌಕಟ್ಟುಗಳ ಪರಿಚಯವನ್ನೂ ನೀಡಲಾಗಿದೆ (ಅಧ್ಯಾಯ ೨). ಈ ಭೂ ಸ್ವಾಧೀನವನ್ನು ತಡೆಗಟ್ಟಲು ಸಾಧ್ಯವೇ ಇಲ್ಲವೇ ? ಎಂಬ ಪ್ರಶ್ನೆಗೆ ಸಾಧ್ಯವಿದೆ ಎಂಬ ಭರವಸೆಯನ್ನು ನೀಡುವ ಮಾರ್ಗದರ್ಶಿ ಸೂತ್ರಗಳನ್ನು ಅಧ್ಯಾಯ ೩ ಮತ್ತು ೪ರಲ್ಲಿ ಒದಗಿಸಲಾಗಿದೆ. ಹೆದ್ದಾರಿ, ಮೇಲ್ಸೇತುವೆ, ಅಣೆಕಟ್ಟೆ, ವಿದ್ಯುತ್ ಉತ್ಪಾದನೆ, ಪರಮಾಣು ಘಟಕಗಳು, ಗಣಿಗಾರಿಕೆ. . . ಹೀಗೆ ಔದ್ಯೋಗಿಕ-ಔದ್ಯಮಿಕ ಜಗತ್ತಿನ ವಿಸ್ತರಣೆಗಾಗಿ ತಮ್ಮ ಭೂಮಿಯನ್ನು ನಿರಂತರವಾಗಿ ಕಳೆದುಕೊಳ್ಳುತ್ತಲೇ ಇರುವ ಲಕ್ಷಾಂತರ ಸಂತ್ರಸ್ತರು ಇಂದು ಭಾರತದ ಅತ್ಯಂತ ನಿರ್ಲಕ್ಷಿತ ಸಮಾಜವಾಗಿ ಕಾಣುತ್ತಾರೆ. ಈ ಸಮಾಜಗಳ ದುಸ್ತರ ಬದುಕು ಬವಣೆಯನ್ನು ಪುಸ್ತಕದ ಅಧ್ಯಾಯ ೫ ಮತ್ತು ೬ರಲ್ಲಿ ಸವಿಸ್ತಾರವಾಗಿ ನೀಡಲಾಗಿದೆ.
ಸತತವಾಗಿ ಕ್ಷೀಣಿಸುತ್ತಿರುವ ಕೃಷಿ ಯೋಗ್ಯ ಭೂಮಿ ಮತ್ತು ಅದನ್ನು ಕಬಳಿಸುತ್ತಿರುವ ಆಧುನಿಕ ಮೂಲ ಸೌಕರ್ಯಗಳು, ಈಗಾಗಲೇ ಹೆಚ್ಚಾಗುತ್ತಿರುವ ಸಾಮಾಜಿಕ ಆರ್ಥಿಕ ಅಸಮಾನತೆಗಳನ್ನು ಹೇಗೆ ಹಿಗ್ಗಿಸುತ್ತವೆ ಎಂಬುದರ ಬಗ್ಗೆ ಅಧ್ಯಾಯ ೭ರಲ್ಲಿ ಪರಾಮರ್ಶಿಸಿರುವ ಸಮಸ್ಯೆಗಳು, ಮಿತಿಗಳು ಮತ್ತು ಅವಕಾಶಗಳನ್ನು ಕುರಿತ ಬರಹ ಉಪಯುಕ್ತವಾಗಿ ಕಾಣುತ್ತವೆ.
ಪುಸ್ತಕದ ಎರಡನೇ ಭಾಗದಲ್ಲಿ ಒದಗಿಸಲಾಗಿರುವ ಅನುಬಂಧಗಳು ನಿರಂತರ ಹೋರಾಟದಲ್ಲಿ ತೊಡಗಿರುವ ಸಂಘಟನೆಗಳಿಗೆ ಒಂದು ಕೈಪಿಡಿ ಯಂತೆ ರೂಪುಗೊಂಡಿದೆ. ಅಧ್ಯಾಯ ೮ರಲ್ಲಿ ಹೇಳಿರುವಂತೆ ‘ಹೋರಾಟ ವೊಂದೇ ದಾರಿ’. ಭೂಮಿ ಎನ್ನುವ ನಿಸರ್ಗದ ಅಮೂಲ್ಯ ಕೊಡುಗೆಯನ್ನು ನಮ್ಮದಾಗಿಸಿಕೊಳ್ಳುವ ಜವಾಬ್ದಾರಿ ಇಡೀ ಸಮಾಜದ ಮೇಲಿದೆ. ಅಂದರೆ ಈ ಸಂಪತ್ತು ಮಾರುಕಟ್ಟೆಯ ಲಾಭದ ಕಚ್ಚಾವಸ್ತುವಾಗದೆ, ಭವಿಷ್ಯದ ತಲೆ ಮಾರಿನ ಸುಸ್ಥಿರ ಬದುಕಿಗೆ ಮೂಲ ನೆಲೆಯಾಗಿ ಉಳಿಯಬೇಕಾದ ಅವಶ್ಯಕತೆ ಇದೆ. ಸಾಮೂಹಿಕ ಪ್ರಯತ್ನದ ಒಂದು ಫಲಶ್ರುತಿಯಾಗಿ ಅಕ್ಷರ ರೂಪ ತಳೆದಿರುವ ‘ಭೂ ಸ್ವಾಧೀನದ ಒಳಸುಳಿಗಳು’ ಕೃತಿಯ ಸಾರ್ಥಕತೆಯೂ ಇದರಲ್ಲೇ ಅಡಗಿದೆ.





