Mysore
22
broken clouds

Social Media

ಸೋಮವಾರ, 13 ಜನವರಿ 2025
Light
Dark

ಪ್ರಜಾಸತ್ತೆಯನ್ನು ಅಣಕಿಸುತ್ತಿರುವ ಪಕ್ಷಾಂತರದ ವ್ಯಸನ

ನಾ ದಿವಾಕರ

ಚುನಾಯಿತ ಜನಪ್ರತಿನಿಧಿಗಳು ಮತದಾರಪ್ರಭುಗಳ ಮತದ ಮೌಲ್ಯವನ್ನು ಅಪಮೌಲ್ಯಗೊಳಿಸುತ್ತಿದ್ದಾರೆ  

ಮಹಾರಾಷ್ಟ್ರದ ರಾಜಕಾರಣದಲ್ಲಿ ನಡೆದ ಇತ್ತೀಚಿನ ಬೆಳವಣಿಗೆಗಳು ಭಾರತದ ಪ್ರಜಾತಂತ್ರ ವ್ಯವಸ್ಥೆಯ ಮುಂದೆ ಹಲವು ಪ್ರಶ್ನೆಗಳನ್ನೂ, ಸವಾಲುಗಳನ್ನೂ ತಂದೊಡ್ಡಿವೆ. ಪ್ರಜಾಸತ್ತಾತ್ಮಕ ಚುನಾವಣೆಗಳ ಮೂಲಕ ಸಾರ್ವಭೌಮ ಪ್ರಜೆಗಳಿಂದ ಚುನಾಯಿತರಾಗಿ ಅಧಿಕಾರದ ಗದ್ದುಗೆ ಏರುವ ರಾಜಕೀಯ ಪಕ್ಷಗಳು ಮತ್ತು ಈ ಪಕ್ಷಗಳನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು ತಾವು ಮೂಲತಃ ಯಾರನ್ನು ಪ್ರತಿನಿಧಿಸುತ್ತಿದ್ದೇವೆ ಎಂಬುದನ್ನೇ ಮರೆತು ಅಧಿಕಾರ ರಾಜಕಾರಣದ ಚದುರಂಗದಲ್ಲಿ ತಮ್ಮ ನೆಲೆಗಳನ್ನು ಬದಲಿಸುತ್ತಲೇ ಇದ್ದಾರೆ. ಇಂದು ಆಯ್ಕೆಯಾದ ಜನಪ್ರತಿನಿಧಿಗಳು ನಾಳೆ ಯಾವ ಪಕ್ಷದಲ್ಲಿರುತ್ತಾರೆ ಎಂದು ಊಹಿಸಲೂ ಸಾಧ್ಯವಾಗದಷ್ಟು ಮಟ್ಟಿಗೆ ಶಾಸಕರು, ಸಂಸದರು ತಮ್ಮ ಅಧಿಕಾರದ ನೆಲೆಗಳನ್ನು ಬದಲಿಸುವಲ್ಲಿ ತೊಡಗಿರುವುದನ್ನು ಕಳೆದ ಎಂಟು ವರ್ಷಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕಾಣುತ್ತಿದ್ದೇವೆ.

ಪ್ರಜಾಪ್ರಭುತ್ವದಲ್ಲಿ ಆಳುವ ಸರ್ಕಾರಗಳನ್ನು ಚುನಾಯಿಸುವ ಪ್ರತಿಯೊಂದು ಮತಕ್ಕೂ ಒಂದು ವಾಸ್ತವಿಕ ಮೌಲ್ಯವಿದೆ. ಈ ಮೌಲ್ಯವನ್ನು ವಾಣಿಜ್ಯೀಕರಿಸಿ, ಮತಗಳನ್ನು ಹಣ ಚೆಲ್ಲುವುದರ ಮೂಲಕ, ಆಮಿಷಗಳನ್ನೊಡ್ಡುವುದರ ಮೂಲಕ, ಸಂತೆಯ ಸರಕುಗಳನ್ನಾಗಿ ಮಾಡಿರುವ ಭಾರತದ ಪ್ರಜಾತಂತ್ರ ವ್ಯವಸ್ಥೆ ಮತಗಳನ್ನು ಖರೀದಿಸುವ ಅನೇಕ ರಣತಂತ್ರಗಳನ್ನೂ ಸೃಷ್ಟಿಸಿದೆ. ಮತ ಎನ್ನುವುದು ಸಂವಿಧಾನ ನಮಗೆ ನೀಡಿರುವ ಅಮೂಲ್ಯ ಆಸ್ತಿ, ಅದನ್ನು ಮಾರಿಕೊಳ್ಳುವ ಅಧಿಕಾರವಾಗಲೀ, ಹಕ್ಕಾಗಲೀ ತಮಗೆ ಇಲ್ಲ ಎಂಬ ಪರಿಜ್ಞಾನವೂ ಇಲ್ಲದೆ ಭಾರತದ ಮತದಾರರು ಹಣದ ಆಮಿಷಕ್ಕೆ ಬಲಿಯಾಗಿ ತಮ್ಮ ಮತಗಳನ್ನು ಮಾರಿಕೊಳ್ಳುತ್ತಿರುವುದನ್ನು ನಮ್ಮ ಪ್ರಜ್ಞಾವಂತ ಸಮಾಜವೂ ಸ್ವೀಕರಿಸಿಬಿಟ್ಟಿದೆ. ಈಗ ನಮ್ಮ ಪ್ರಜಾತಂತ್ರ ವ್ಯವಸ್ಥೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಮತದಾರರ ಆಯ್ಕೆಯನ್ನೇ ಅಪ್ರಸ್ತುತವಾಗಿಸಿ, ಆಯ್ಕೆಯಾದ ಪ್ರತಿನಿಧಿಗಳನ್ನೇ ಆಮಿಷಗಳ ಮೂಲಕ, ಅಧಿಕಾರ ಮತ್ತು ಹುದ್ದೆಗಳ ಮೂಲಕ ಖರೀದಿಸುವ ಒಂದು ನೂತನ ಪರಂಪರೆಯನ್ನು ರೂಪಿಸಿಕೊಂಡಿದೆ.

ಈ ನೂತನ ಪರಂಪರೆಗೆ ಒಂದು ರೀತಿಯಲ್ಲಿ ಕರ್ನಾಟಕವೂ ಕರ್ಮಭೂಮಿಯಾಗಿದೆ. ಮಧ್ಯಪ್ರದೇಶ ಮತ್ತು ಗೋವಾ ರಾಜ್ಯಗಳಲ್ಲಿ ಇದರ ಪರಾಕಾಷ್ಠೆಯನ್ನು ಕಂಡಿದ್ದೇವೆ. ಈಗ ಮಹಾರಾಷ್ಟ್ರದಲ್ಲಿ ಮತ್ತೊಂದು ಹೊಸ ಶೆಕೆ ಆರಂಭವಾಗಿದೆ. ಚುನಾಯಿತ ಸರ್ಕಾರಗಳು ಸಾರ್ವಜನಿಕರಿಗೆ ಮತ್ತು ಮತದಾರರಿಗೆ ಉತ್ತರದಾಯಿಯಾಗಿರುವುದಕ್ಕಿಂತಲೂ ಹೆಚ್ಚಾಗಿ, ಅಧಿಕಾರ ಕೇಂದ್ರಗಳಿಗೆ, ರಾಜಕೀಯ ಪ್ರಾಬಲ್ಯವನ್ನು ಹೊಂದಿರುವ ರಾಷ್ಟ್ರೀಯ ಪಕ್ಷಗಳಿಗೆ ಉತ್ತರದಾಯಿಯಾಗಿರುತ್ತವೆ. ಈ ವಿಕೃತ ಸಂಸ್ಕೃತಿಯನ್ನು ತಡೆಗಟ್ಟಲೆಂದೇ ರೂಪಿಸಲಾದ ಪಕ್ಷಾಂತರ ನಿಷೇಧ ಕಾಯ್ದೆ ಮತ್ತು ಈ ನಿಟ್ಟಿನಲ್ಲಿ ಜಾಗ್ರತೆ ವಹಿಸಬೇಕಾದ ಸಾಂವಿಧಾನಿಕ ಸಂಸ್ಥೆಗಳು ಬಹುಮಟ್ಟಿಗೆ ನಿಷ್ಕ್ರಿಯವಾಗಿರುವುದರ ಪರಿಣಾಮವನ್ನು ಎದುರಿಸುತ್ತಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಸಿರುಗಟ್ಟದಂತೆ ಕಾಪಾಡಿ, ಅದರ ಮೂಲ ಸತ್ವವನ್ನು ಉಳಿಸಿಕೊಳ್ಳಲೆಂದೇ ರೂಪಿಸಲಾಗಿರುವ ಪಕ್ಷಾಂತರ ನಿಷೇಧ ಕಾಯ್ದೆಯಲ್ಲಿನ ಕೆಲವು ಸೂಕ್ಷ್ಮ ಲೋಪಗಳನ್ನು ಬಳಸಿಕೊಂಡು ರಾಜಕೀಯ ಪಕ್ಷಗಳು ಪ್ರಜಾತಂತ್ರದ ಮೌಲ್ಯಗಳನ್ನೇ ಬುಡಮೇಲು ಮಾಡುತ್ತಿವೆ. ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ತಾತ್ವಿಕವಾಗಿ ನೆಲಸಮ ಮಾಡಲಾಗುತ್ತಿರುವ ಈ ಹೊತ್ತಿನಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯ ಔಚಿತ್ಯ ಮತ್ತು ಪ್ರಸ್ತುತತೆಯ ಬಗ್ಗೆ ಹೆಚ್ಚಿನ ಚರ್ಚೆಗಳೂ ನಡೆಯಬೇಕಿದೆ.

ಪ್ರಸ್ತುತ ಸನ್ನಿವೇಶದಲ್ಲಿ ಪ್ರಜಾಪ್ರಭುತ್ವವು ಸಾಂಸ್ಥಿಕವಾಗಿ ಹಿಂಬದಿಗೆ ಸರಿದಿದ್ದು, ಪ್ರಜೆಗಳು ನೇಪಥ್ಯಕ್ಕೆ ಸರಿದಿದ್ದಾರೆ. ವ್ಯಕ್ತಿ ಕೇಂದ್ರಿತ ರಾಜಕಾರಣವೇ ಮುನ್ನೆಲೆಗೆ ಬರುತ್ತಿದೆ. ಒಂದೆಡೆ ಪಕ್ಷಾಂತರ ಪ್ರಕ್ರಿಯೆಯನ್ನೇ ಕಾನೂನಾತ್ಮಕ ನೆಲೆಯಲ್ಲಿ ಸ್ವೀಕೃತವಾಗಿ ಮಾಡುವ ಪ್ರಕ್ರಿಯೆ ನಡೆಯುತ್ತಿದ್ದರೆ ಮತ್ತೊಂದೆಡೆ ರಾಜಕೀಯವಾಗಿ ಪಕ್ಷಾಂತರದ ಸ್ವರೂಪವನ್ನೇ ಬದಲಿಸುವ ಪ್ರಯತ್ನಗಳು ನಡೆಯುತ್ತಿದೆ. ಪಕ್ಷಾಂತರ ನಿಷೇಧ ಕಾಯ್ದೆಯ ಮೂಲ ಉದ್ದೇಶ ಚುನಾಯಿತ ಸರ್ಕಾರಗಳನ್ನು ಅಸ್ಥಿರಗೊಳಿಸುವಂತಹ ಮತ್ತು ತನ್ಮೂಲಕ ಪ್ರಜಾತಂತ್ರ ವ್ಯವಸ್ಥೆಯನ್ನೇ ದುರ್ಬಲಗೊಳಿಸುವ ರಾಜಕೀಯ ಪಕ್ಷಾಂತರಗಳನ್ನು ನಿಯಂತ್ರಿಸುವುದೇ ಆಗಿತ್ತು. ಚುನಾಯಿತ ಪ್ರತಿನಿಧಿಗಳು ತಮ್ಮ ಸ್ವಾರ್ಥ ಹಿತಾಸಕ್ತಿಯಿಂದ, ತಾತ್ವಿಕ ನಿಷ್ಠೆಗಳಿಗನುಗುಣವಾಗಿ ರಾಜೀನಾಮೆ ನೀಡಿ ಮತ್ತೊಮ್ಮೆ ಆಯ್ಕೆಯಾಗುವುದರಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುವುದೇ ಅಲ್ಲದೆ, ಮತದಾರರ ವಿಶ್ವಾಸಕ್ಕೂ ಧಕ್ಕೆ ಉಂಟಾಗುತ್ತದೆ. ಭಾರತದ ಸಂವಿಧಾನ ಕರ್ತೃಗಳು ರಾಜಕೀಯ ಪಕ್ಷಾಂತರದ ಬಗ್ಗೆ ಯಾವುದೇ ಸ್ಪಷ್ಟ ನಿಯಮಗಳನ್ನು ರೂಪಿಸಿರಲಿಲ್ಲ. ಏಕೆಂದರೆ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಪ್ರಜಾತಂತ್ರವನ್ನು ರಕ್ಷಿಸಬೇಕಾದ ಹೊಣೆ ಹೊರಿಸಲಾಗಿತ್ತು. ಚುನಾಯಿತ ಜನಪ್ರತಿನಿಧಿಗಳೂ ಸಹ ಈ ಸಂಸ್ಥೆಗಳ ನಿಯಮಾನುಸಾರ, ಸಾಂವಿಧಾನಿಕ ಮೌಲ್ಯಗಳಿಗನುಸಾರ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ ಎಂಬ ವಿಶ್ವಾಸವನ್ನು ಈ ಸಂದರ್ಭದಲ್ಲಿ ಕಾಣಬಹುದಿತ್ತು. ಆದರೆ ಇದು ಹೆಚ್ಚು ಕಾಲ ಉಳಿಯಲಿಲ್ಲ. ೧೯೬೭ರ ಮಹಾಚುನಾವಣೆಗಳ ನಂತರ ಹಲವು ರಾಜ್ಯಗಳಲ್ಲಿ ಚುನಾಯಿತ ಸರ್ಕಾರಗಳು ಪದಚ್ಯುತಗೊಂಡವು. ರಾಜಕೀಯ ಪಕ್ಷಾಂತರವೂ ಸಹ ವ್ಯಾಪಿಸತೊಡಗಿತ್ತು.

ಈ ಹಿನ್ನೆಲೆಯಲ್ಲೇ ೧೯೮೫ರಲ್ಲಿ ಸಂವಿಧಾನದ ೫೨ನೆಯ ತಿದ್ದುಪಡಿಯ ಮೂಲಕ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲಾಯಿತು. ಮೂಲತಃ ಈ ಕಾಯ್ದೆಯಡಿ ಯಾವುದೇ ಒಂದು ಪಕ್ಷದ ಮೂರನೆ ಒಂದರಷ್ಟು ಶಾಸಕರು/ಸಂಸದರು ಮತ್ತೊಂದು ಪಕ್ಷಕ್ಕೆ ಪಕ್ಷಾಂತರವಾದರೆ ಅವರು ಶಾಸನಸಭೆಯ ಸದಸ್ಯತ್ವದಿಂದ ಅನರ್ಹರಾಗುವುದಿತ್ತು. ೨೦೦೩ರಲ್ಲಿ ಸಂವಿಧಾನದ ೯೧ನೆಯ ತಿದ್ದುಪಡಿಯ ಮೂಲಕ ಇದನ್ನು ಮೂರನೇ ಎರಡರಷ್ಟು ಮಾಡಲಾಯಿತು. ಚುನಾಯಿತ ಸದಸ್ಯರನ್ನು ಅನರ್ಹಗೊಳಿಸುವ ಹಕ್ಕನ್ನು ಸಭಾಧ್ಯಕ್ಷರಿಗೆ ನೀಡಲಾಗಿತ್ತಲ್ಲದೆ ನ್ಯಾಯಾಂಗ ಪರಾಮರ್ಶೆಯಿಂದ ಮುಕ್ತಗೊಳಿಸಲಾಗಿತ್ತು. ಆದರೆ ಆನಂತರದಲ್ಲಿ ಕಿಹೋಟೋ ಹೊಲ್ಲೊಹಾನ್ ಮತ್ತು ಝಾಜಿಲ್ಲು ಮೊಕದ್ದಮೆಯಲ್ಲಿ ಶಾಸನಸಭೆಯ ಸಭಾಧ್ಯಕ್ಷರ ತೀರ್ಪು ನ್ಯಾಯಾಂಗ ವಿಮರ್ಶೆಗೊಳಪಡಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಅಂದಿನಿಂದಲೂ ಪಕ್ಷಾಂತರ ಮಾಡುವ ಸಂಸದರ/ಶಾಸಕರ ಅರ್ಹತೆಯನ್ನು ನಿಷ್ಕರ್ಷೆ ಮಾಡುವುದು ನ್ಯಾಯಾಲಯದ ಅಂಗಳ ತಲುಪಿತ್ತು. ಈ ಗೊಂದಲದಿಂದ ತಪ್ಪಿಸಿಕೊಳ್ಳಲೆಂದೇ ರಾಜಕೀಯ ಪಕ್ಷಗಳು ಪಕ್ಷಾಂತರದ ಕಾಯ್ದೆಯನ್ನೇ ಅಪ್ರಸ್ತುತಗೊಳಿಸುವಂತೆ , ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೊಂದು ಪಕ್ಷಕ್ಕೆ ಸೇರಿ ಪುನಃ ಚುನಾಯಿತರಾಗುವ ಒಂದು ಪರಂಪರೆಯನ್ನು ಕಂಡುಕೊಂಡಿದ್ದಾರೆ.

ಶಾಸನಸಭೆಗಳ ಸಭಾಧ್ಯಕ್ಷರು ನಿಷ್ಪಕ್ಷಪಾತತೆಯಿಂದ ಸಂವಿಧಾನಬದ್ಧತೆಯಿಂದ ಕಾರ್ಯನಿರ್ವಹಿಸುವ ಪರಂಪರೆಗೆ ಎಂದೋ ತಿಲಾಂಜಲಿ ನೀಡಿರುವ ಭಾರತದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನತೆಯ ವಿಶ್ವಾಸವನ್ನು ಉಳಿಸಿಕೊಳ್ಳಲು ನ್ಯಾಯಾಂಗ ಏಕೈಕ ಮಾರ್ಗವಾಗಿದೆ. ಒಂದು ಪಕ್ಷದಿಂದ ಆಯ್ಕೆಯಾಗಿ, ಸರ್ಕಾರದ ರಚನೆಯಾಗುವುದಕ್ಕೂ ಮುನ್ನವೇ ಬಹುಮತ ಗಳಿಸಿರುವ ಪಕ್ಷವನ್ನು ತ್ಯಜಿಸಿ, ಶಾಸಕ/ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ, ಮತ್ತೊಂದು ಪಕ್ಷಕ್ಕೆ ಸೇರಿ ಮರು ಆಯ್ಕೆಯಾಗುವ ಒಂದು ವಿಶಿಷ್ಟ ಪರಂಪರೆಯನ್ನು ಕಳೆದ ಹಲವು ಚುನಾವಣೆಗಳಿಂದ ಕಾಣುತ್ತಿದ್ದೇವೆ. ಇಲ್ಲಿ ಮತದಾರರ ನಡವಳಿಕೆಯೂ ಸಹ ಮುಖ್ಯವಾಗುತ್ತದೆ. ವಿಧಾನಸಭೆ ಅಥವಾ ಲೋಕಸಭೆಯ ಅಧ್ಯಕ್ಷ ಪೀಠದಲ್ಲಿರುವವರು, ಆ ಸ್ಥಾನವನ್ನು ಅಲಂಕರಿಸಿದ ಕೂಡಲೇ ಪಕ್ಷಾತೀತವಾಗಿ ಕಾರ್ಯನಿರ್ವಹಿಸುವ ಸಂವಿಧಾನ ರಕ್ಷಕರಾಗಿ ಇರುವುದು ಅಪೇಕ್ಷಿತ ನಿಯಮವಾದರೂ, ಈ ಶಿಷ್ಟಾಚಾರಗಳಿಗೆ ನಮ್ಮ ರಾಜಕೀಯ ವ್ಯವಸ್ಥೆ ಎಂದೋ ತಿಲಾಂಜಲಿ ನೀಡಿದೆ. ಇಂದು ಬಹುಪಾಲು ಸನ್ನಿವೇಶಗಳಲ್ಲಿ ಸಭಾಧ್ಯಕ್ಷರು ಆಡಳಿತಾರೂಢ ಪಕ್ಷಕ್ಕೆ ಪೂರಕವಾದಂತಹ ನಿರ್ಣಯಗಳನ್ನೇ ತೆಗೆದುಕೊಳ್ಳುವುದನ್ನು ಗಮನಿಸುತ್ತಿದ್ದೇವೆ.

ಮತದಾರರೂ ಸಹ ರಾಜಕೀಯ ನಾಯಕರ ಪಕ್ಷಾಂತರದ ಬಗ್ಗೆಯಾಗಲೀ, ಅಭ್ಯರ್ಥಿಗಳ ಪ್ರಾಮಾಣಿಕತೆಯ ಬಗ್ಗೆಯಾಗಲೀ ಹೆಚ್ಚು ಆಲೋಚನೆ ಮಾಡದಿರುವುದನ್ನೂ ಗಮನಿಸುತ್ತಿದ್ದೇವೆ. ಅಂದರೆ ಪಕ್ಷಾಂತರ ಮಾಡುತ್ತಲೇ ಇರುವ ರಾಜಕೀಯ ನಾಯಕರ ಪ್ರಾಮಾಣಿಕತೆಯು ಎಷ್ಟೇ ಪ್ರಶ್ನಾರ್ಹವಾಗುತ್ತಿದ್ದರೂ ಅದು ಸಾಮಾನ್ಯ ಮತದಾರರನ್ನು ಏಕೆ ಬಾಧಿಸುತ್ತಿಲ್ಲ ? ಇದಕ್ಕೆ ಕಾರಣವೇನೆಂದರೆ ಭಾರತದ ಬಹುಪಾಲು ಮತದಾರರು ಚುನಾವಣೆಗಳ ಸಂದರ್ಭದಲ್ಲಿ ಪಕ್ಷವನ್ನು ನೋಡಿ ಮತ ಚಲಾಯಿಸುತ್ತಾರೆಯೇ ಹೊರತು ಅಭ್ಯರ್ಥಿಯನ್ನಲ್ಲ. ಹಾಗೊಮ್ಮೆ ಅಭ್ಯರ್ಥಿಗಳ ಅರ್ಹತೆ ಅಥವಾ ಅನರ್ಹತೆಗಳು ಭಾರತೀಯ ಮತದಾರರ ದೃಷ್ಟಿಯಲ್ಲಿ ಪ್ರಾಧಾನ್ಯತೆ ಗಳಿಸಿಬಿಟ್ಟರೆ ಅನೇಕಾನೇಕ ಪಕ್ಷಾಂತರಿ ರಾಜಕಾರಣಿಗಳು ಮತ್ತು ಅಭ್ಯರ್ಥಿಗಳು ವಿಧಾನಸಭೆ ಮತ್ತು ಸಂಸತ್ತನ್ನು ಪ್ರವೇಶಿಸುತ್ತಲೇ ಇರಲಿಲ್ಲ. ಕರ್ನಾಟಕದಲ್ಲೇ ಅನರ್ಹ ಶಾಸಕರ ಹಣೆಪಟ್ಟಿ ಹೊತ್ತುಕೊಂಡೇ ಮರು ಆಯ್ಕೆಯಾದವರ ದೊಡ್ಡ ಬಣವನ್ನೇ ಕಂಡಿದ್ದೇವೆ.ಕೆಲವು ಸಂದರ್ಭಗಳಲ್ಲಿ ಒಬ್ಬ ಶಾಸಕ ಅಥವಾ ಸಂಸದನಿಗೆ ಪಕ್ಷಾಂತರ ಮಾಡಲು ಸಮರ್ಥನೀಯ ಕಾರಣಗಳೂ ಇರಲು ಸಾಧ್ಯ. ಆದರೂ ಅನೇಕ ಶಾಸಕರು ಮತ್ತು ಸಂಸದರು ತಮ್ಮ ವೈಯಕ್ತಿಕ ಹಿತಾಸಕ್ತಿಗಳಿಗಾಗಿಯೇ ಅನ್ಯ ಪಕ್ಷಕ್ಕೆ ಪಕ್ಷಾಂತರ ಮಾಡುತ್ತಾರೆ. ಏಕೆಂದರೆ ಮುಂದಿನ ಚುನಾವಣೆಗಳಲ್ಲಿ ಮತದಾರರು ಜನಪ್ರಿಯ ಪಕ್ಷವೊಂದನ್ನು ಗುರುತಿಸಿ ಮತ ನೀಡುತ್ತಾರೆಯೇ ಹೊರತು, ತಮ್ಮ ನಡವಳಿಕೆಗಳು ಗಣನೆಗೆ ಬರುವುದಿಲ್ಲ ಎಂಬ ವಾಸ್ತವವನ್ನು ಅವರು ಅರಿತಿರುತ್ತಾರೆ. ಪಕ್ಷದಿಂದ ಟಿಕೆಟ್ ಪಡೆಯುವುದೇ ಇಲ್ಲಿ ಮುಖ್ಯವಾಗುತ್ತದೆ. ಜನಪ್ರತಿನಿಧಿಗಳು ಜನತೆಯೊಡನೆ ನಿಕಟ ಸಂಪರ್ಕ ಹೊಂದಿರಬೇಕು ಮತ್ತು ಅವರ ಬೇಕು ಬೇಡಗಳನ್ನು ಪೂರೈಸುವಂತಿರಬೇಕು ಎನ್ನುವುದನ್ನು ಅರಿತಿರುವ ರಾಜಕಾರಣಿಗಳು ಈ ನಿಯಮವನ್ನು ಅನುಸರಿಸುವ ಮೂಲಕ ತಮ್ಮ ಮತಬ್ಯಾಂಕುಗಳನ್ನು ಉಳಿಸಿಕೊಂಡಿರುತ್ತಾರೆ. ಭ್ರಷ್ಟಾಚಾರದ ಅರೋಪಗಳನ್ನು ಹೊತ್ತ ಶಾಸಕರೂ ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿ, ಜನತೆಯ ವಿಶ್ವಾಸ ಗಳಿಸಿರುವುದನ್ನೂ ನಾವು ಕಾಣುತ್ತಲೇ ಇದ್ದೇವೆ. ಇಂತಹ ರಾಜಕೀಯ ನಾಯಕರು ಪಕ್ಷಾತೀತವಾಗಿ ಜನಮನ್ನಣೆ ಗಳಿಸುತ್ತಾರೆ.

೨೦೧೪ರ ಚುನಾವಣೆಗಳ ನಂತರ ಲೋಕನೀತಿ-ಸಿಎಸ್ಡಿಎಸ್ ನಡೆಸಿದ ಸಮೀಕ್ಷೆಯೊಂದರ ಅನುಸಾರ ಶೇ ೫೮ರಷ್ಟು ಮತದಾರರು ಪಕ್ಷವನ್ನು ನೋಡಿ ಮತ ನೀಡುತ್ತಾರೆ. ಶೇ ೩೩ರಷ್ಟು ಮತದಾರರು ಅಭ್ಯರ್ಥಿಯನ್ನು ಪರಿಗಣಿಸುತ್ತಾರೆ. ೨೦೧೯ರ ಚುನಾವಣೆಗಳ ವೇಳೆಗೆ ಪಕ್ಷವನ್ನು ಪರಿಗಣಿಸುವವರ ಪ್ರಮಾಣ ಶೇ ೫೨ಕ್ಕೆ ಕುಸಿದಿತ್ತು ಕಳೆದ ಹಲವು ವರ್ಷಗಳಲ್ಲಿ ಭಾರತದ ರಾಜಕಾರಣದಲ್ಲಿ ಅಭ್ಯರ್ಥಿ ಕೇಂದ್ರಿತ ಮತದಾನದ ಪ್ರಮಾಣ ಹೆಚ್ಚಾಗುತ್ತಿದೆ. ಆದರೂ ಬಹುಮಟ್ಟಿಗೆ ಮತದಾರರು ಪಕ್ಷವನ್ನೇ ಅವಲಂಬಿಸುತ್ತಾರೆ. ಸುಶಿಕ್ಷಿತರಲ್ಲಿದ್ದಂತೆಯೇ ಅನಕ್ಷರಸ್ಥರಲ್ಲಿಯೂ ಇದೇ ಪ್ರವೃತ್ತಿಯನ್ನು ಕಾಣಬಹುದು. ತಾವು ವಿರೋಧಿಸಿ ಚುನಾಯಿತರಾಗುವ ಪಕ್ಷಕ್ಕೇ ಪಕ್ಷಾಂತರ ಮಾಡಿ ಮತ್ತೆ ತಾವು ವಿರೋಧಿಸಿದ್ದ ಪಕ್ಷದಿಂದ ಮರು ಆಯ್ಕೆಯಾಗಿರುವ ಹಲವಾರು ಪ್ರಸಂಗಗಳು ನಮ್ಮ ಕಣ್ಣಮುಂದಿವೆ. ೨೦೨೦ರಲ್ಲಿ ಮಧ್ಯಪ್ರದೇಶದಲ್ಲಿ ೨೨ ಕಾಂಗ್ರೆಸ್ ಶಾಸಕರು,ಕೆಲವು ಸಚಿವರನ್ನೂ ಒಳಗೊಂಡಂತೆ, ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಇವರ ಪೈಕಿ ೧೯ ಶಾಸಕರು ಬಿಜೆಪಿ ಟಿಕೆಟ್ ಪಡೆದು ಮರುಆಯ್ಕೆಯಾಗಿದ್ದರು.

೨೦೧೮ರಲ್ಲಿ ಕರ್ನಾಟಕದ ಅಥಣಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ಮಹೇಶ್ ಕುಮತಳ್ಳಿ ಗೆದ್ದ ಕೂಡಲೇ ಪಕ್ಷಾಂತರ ಮಾಡಿ ಬಿಜೆಪಿ ಟಿಕೆಟ್ ಪಡೆದ ಮರು ಆಯ್ಕೆಯಾಗಿದ್ದರು. ೨೦೨೨ರ ಗೋವಾ ಚುನಾವಣೆಯಲ್ಲಿ ಈ ಪ್ರವೃತ್ತಿಯ ಪರಾಕಾಷ್ಠೆಯನ್ನು ನಾವು ಗಮನಿಸಬಹುದು. ಆದರೆ ಗೋವಾದಲ್ಲಿ ಕೊಂಚ ವ್ಯತ್ಯಾಸವೂ ಆಗಿತ್ತು. ಪಕ್ಷಾಂತರ ಮಾಡಿದ ೧೨ ಶಾಸಕರು ಮರು ಚುನಾವಣೆಯಲ್ಲಿ ಸೋಲು ಅನುಭವಿಸಬೇಕಾಯಿತು. ಆದರೆ ಇದು ಅಪವಾದ ಎಂದೇ ಹೇಳಬಹುದು. ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಯಾವ ರಾಜಕಾರಣಿ ಯಾವ ಕ್ಷಣದಲ್ಲಿ ಯಾವ ಪಕ್ಷದಲ್ಲಿರುತ್ತಾರೆ ಎಂದು ಊಹಿಸುವುದೂ ಅಸಾಧ್ಯವಾಗಿದೆ. ಬಹುಪಾಲು ಎಲ್ಲ ಸರ್ಕಾರಗಳೂ ಪಕ್ಷಾಂತರದ ಪಿಡುಗನ್ನು ಹೋಗಲಾಡಿಸಲು ಪ್ರಯತ್ನಗಳನ್ನು ಮಾಡುತ್ತಲೇ ಇದ್ದರೂ, ರಾಜಕೀಯ ನಾಯಕರು ಮತ್ತು ಪಕ್ಷಗಳು ಈ ಕಾಯ್ದೆಯಲ್ಲಿನ ಲೋಪಗಳನ್ನೇ ಬಳಸಿಕೊಂಡು ಪಕ್ಷಾಂತರ ಪರಂಪರೆಯನ್ನು ಉಳಿಸಿಕೊಂಡುಬಂದಿದ್ದಾರೆ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ೩೭ ಶಿವಸೇನೆ ಶಾಸಕರು ಬಂಡಾಯ ಹೂಡುವ ಮೂಲಕ ಮಹಾ ವಿಕಾಸ್ ಅಗಾಡಿ ಸಮ್ಮಿಶ್ರ ಸರ್ಕಾರವನ್ನು ಪದಚ್ಯುತಗೊಳಿಸಿರುವುದು ಈ ನಿಟ್ಟಿನಲ್ಲಿ ಮತ್ತೊಂದು ನಿದರ್ಶನವಾಗಿದೆ. ಈ ಶಾಸಕರು ಶಿವಸೇನೆಯ ಬಂಡಾಯ ಬಣದಲ್ಲಿಯೇ ಉಳಿಯುತ್ತಾರೋ ಅಥವಾ ಬಿಜೆಪಿಗೆ ವಲಸೆ ಹೋಗುತ್ತಾರೋ ಎನ್ನುವುದನ್ನು ಕಾದು ನೋಡಬೇಕಿದೆ.

(ಈ ಲೇಖನದ ಕೆಲವು ಮಾಹಿತಿ/ಅಂಕಿಅಂಶಗಳನ್ನು ದ ಹಿಂದೂ ಪತ್ರಿಕೆಯ ಲೇಖನ   Why is defection a non issue for voters ? ಸಂಜಯ್ ಕುಮಾರ್- ಇದರಿಂದ ಪಡೆಯಲಾಗಿದೆ)

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ