Mysore
26
broken clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಸಾಹಿತ್ಯ ಮೇಳದಲ್ಲಿ ಆಹಾರ ಹಕ್ಕಿನ ಕೂಗು

ಸಮಾಜವನ್ನು ಒಟ್ಟುಗೂಡಿಸಬೇಕಾದ ಅನ್ನ ವಿಭಜಿಸುವುದು ಸಾಂಸ್ಕೃತಿಕ ವೈಕಲ್ಯದ ಸಂಕೇತ

ನಾ.ದಿವಾಕರ
ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನಡೆಯುವ ಅಕ್ಷರ ಜಾತ್ರೆ ‘ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ ಶತಮಾನದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಆಹಾರ ಸಂಸ್ಕತಿಯ ಚರ್ಚೆಗಳ ಅಂಗಳವಾಗಿದೆ. ಇಷ್ಟು ವರ್ಷಗಳೂ ಪಾರಂಪರಿಕವಾಗಿ ನಡೆದುಕೊಂಡು ಬಂದಿದ್ದ ರೀತಿ ರಿವಾಜುಗಳಿಗೆ ಮಂಡ್ಯ ಸಾಹಿತ್ಯ ಸಮ್ಮೇಳನ ಹೊಸ ಆಯಾಮವನ್ನು ನೀಡಿರುವುದನ್ನು, ಬದಲಾದ ಸಾಂಸ್ಕತಿಕ ಸನ್ನಿವೇಶಗಳಲ್ಲಿ, ಸ್ವಾಗತಿಸಲೇಬೇಕಿದೆ. ಪ್ರತಿಯೊಂದು ಸಮ್ಮೇಳನ ನಡೆದಾಗಲೂ ಗಮನಿಸಬಹುದಾದ ಒಂದು ವೈಶಿಷ್ಟ್ಯ ಎಂದರೆ, ಆಯೋಜಕರು ಆಯಾ ಸ್ಥಳದ ಪ್ರಾದೇಶಿಕ ಆಹಾರ ಪದ್ಧತಿಯನ್ನು ಗೌರವಿಸುವುದು. ಆದರೆ ಯಾವುದೇ ಸಂದರ್ಭದಲ್ಲೂ ಈ ಪರಿಕಲ್ಪನೆಯು ಸಸ್ಯಾಹರವನ್ನು ದಾಟಿ ಹೋಗದಿರುವುದು ನಮ್ಮ ಸಾಂಸ್ಕ ತಿಕ ಅಸೂಕ್ಷತೆ ಮತ್ತು ಸಂಕುಚಿತತೆಯನ್ನು ತೋರಿಸುತ್ತದೆ. ಭಾರತೀಯ ಜನಸಂಸ್ಕತಿಯ ಒಂದು ವೈಶಿಷ್ಟ್ಯ ಮತ್ತು ವೈರುಧ್ಯ ಇರುವುದೇ ಆಹಾರ ಪದ್ಧತಿಗಳಲ್ಲಿ. ಪ್ರತಿ ನೂರು ಕಿಲೋಮೀಟರ್‌ಗೆ ವಿಭಿನ್ನ ಆಹಾರ ಪದ್ಧತಿಗಳಿರುವುದನ್ನು ಕೋಲಾರದಿಂದ ಬೀದರ್‌ವರೆಗೂ ಗುರುತಿಸಬಹುದು.

ಆಧುನಿಕತೆ ಮತ್ತು ಮಾರುಕಟ್ಟೆಯ ವಿಸ್ತರಣೆಯ ಪ್ರಭಾವದಿಂದ ದಕ್ಷಿಣ-ಉತ್ತರ-ಮಲೆನಾಡಿನ ಆಹಾರ ಪದ್ಧತಿಗಳು ಪರಸ್ಪರ ವಿನಿಮಯವಾಗುವುದು ಸಾಧ್ಯವಾಗಿ ದ್ದರೂ, ಇಂದಿಗೂ ತಳಸಮಾಜದ ನಿತ್ಯ ಬದುಕಿನಲ್ಲಿ ಪಾರಂಪ ರಿಕ ಆಹಾರ ಪದ್ಧತಿಯೇ ಜೀವಂತವಾಗಿರುತ್ತದೆ. ಈ ವೈವಿಧ್ಯತೆಗಳನ್ನು ಗೌರವಿಸುವುದೇ ಭಾರತದ ಬಹುಸಂಖ್ಯಾತ ಸಮಾಜದಲ್ಲಿ ಮಾಂಸಾಹಾರ ಎನ್ನುವುದು ನಿತ್ಯ ಬದುಕಿನ ಒಂದು ಭಾಗವಾಗಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಧಾರ್ಮಿಕ ಅಥವಾ ಸಾಂಪ್ರದಾಯಿಕ ಶ್ರದ್ಧಾನಂಬಿಕೆಗಳ ಪರಿಣಾಮವಾಗಿ ನಿರ್ದಿಷ್ಟ ವಾರದ ದಿನಗಳಲ್ಲಿ ಅಥವಾ ಹಬ್ಬದ ದಿನಗಳಲ್ಲಿ ಮಾಂಸಾಹಾರಕ್ಕೆ ನಿರ್ಬಂಧ ಇರುವುದಾ ದರೂ, ಇದನ್ನು ಸಾರ್ವತ್ರೀಕರಿಸಲಾಗುವುದಿಲ್ಲ. ಹಾಗೆ ನೋಡಿ ದರೆ ಭಾರತದ ಸಾಂಸ್ಕ ತಿಕ-ಧಾರ್ಮಿಕ ಪರಿಸರದಲ್ಲಿ ಆಹಾರ ಪದ್ಧತಿಗಳಿಗೆ ಇರುವ ನಿರ್ಬಂಧಗಳನ್ನು ಸಹಿಸಿಕೊಂಡು, ಸಹಕಾರ ನೀಡುವ ಅನ್ಯ ಜಾತಿ ಸಮುದಾಯಗಳ ಸಹನಶೀಲತೆಯನ್ನು ಮೆಚ್ಚಲೇಬೇಕಲ್ಲವೇ?

ಭಾರತೀಯ ಜಾತಿ ವ್ಯವಸ್ಥೆಯಲ್ಲಿ ಈ ಸೂಕ್ಷವನ್ನು ಗಮನಿಸಿಯೇ ಡಾ. ಬಿ. ಆರ್. ಅಂಬೇಡ್ಕರ್ ಜಾತಿ ವಿನಾಶದ ಹಾದಿಯಲ್ಲಿ ಸಹಭೋಜನವನ್ನೂ ಒಂದು ಮುಖ್ಯ ಸಾಧನವಾಗಿ ಪರಿಗಣಿಸುತ್ತಾರೆ. ಇಂದಿಗೂ ಧಾರ್ಮಿಕ ಕೇಂದ್ರ ಗಳಲ್ಲಿ ಪಂಕ್ತಿ ಭೇದವನ್ನು ಆಚರಿಸುತ್ತಿರುವ ಹೊತ್ತಿನಲ್ಲಿ ಸಹಭೋಜನ ಸಮಾಜವನ್ನು ಒಂದುಗೂಡಿಸುವ ಮಾರ್ಗ ವಾಗಿ ಕಾಣುವುದು ಸಹಜ. ಚಾಲ್ತಿಯಲ್ಲಿರುವ ಪಂಕ್ತಿಭೇದ ವನ್ನೂ ದಾಟಿ ನೋಡಿದಾಗ ಅಲ್ಲಿ ಮತ್ತೊಂದು ಸ್ತರದ ಭೋಜನ ಪದ್ಧತಿಯನ್ನು ಗಮನಿಸಬಹುದು. ಧಾರ್ಮಿಕ ಆಚರಣೆಗಳಲ್ಲಿ ಮೇಲ್ಪಂಕ್ತಿಯಲ್ಲಿರುವ ಪುರೋಹಿತಶಾಹಿ ವರ್ಗವು ಈ ಮೇಲ್ಸ್ತರದ ಭಾಗವಾಗಿ ಕಾಣುತ್ತದೆ. ಒಂದೇ ಜಾತಿಯಲ್ಲಿ ಈ ಅಂತರವನ್ನು ಬಹುತೇಕ ಧಾರ್ಮಿಕ ಮಠಗಳಲ್ಲಿ, ದೇವಾಲಯಗಳಲ್ಲಿ, ಮೇಲ್ಜಾತಿಯ ವಿವಾಹ ಗಳಲ್ಲೂ ಗುರುತಿಸಬಹುದು.

ಸಂಪ್ರದಾಯದ ಗೋಡೆಗಳನ್ನು ದಾಟಿ: ಈ ಸಾಂಪ್ರದಾಯಿಕ ಮನಸ್ಥಿತಿಯೇ ಭಾರತದಲ್ಲಿ ಶತಮಾನಗಳಿಂದಲೂ ಬೇರೂರಿ ರುವ ಹಾಗೂ ನಡೆದುಕೊಂಡು ಬಂದಿರುವ ಆಹಾರ ವೈವಿಧ್ಯತೆಯ ಸಾಂಸ್ಕ ತಿಕ ನೆಲೆಗಳನ್ನು ನಿರಾಕರಿಸುವಂತೆ ಮಾಡುತ್ತದೆ. ಈ ನಿರಾಕರಣೆಯ ಬೌದ್ಧಿಕ ಚಿಂತನೆಯು ಸಾಮಾಜೀಕರಣಕ್ಕೊಳಗಾದಾಗ ವ್ಯಕ್ತಿಗತ ನೆಲೆಯಲ್ಲಿ ವರ್ಜ್ಯ ಎನಿಸುವ ಆಹಾರಗಳು ಸಾಮುದಾಯಿಕ ನೆಲೆಯಲ್ಲೂ ವರ್ಜ್ಯವಾಗುತ್ತವೆ. ಭಾರತದ ಸಾಂಪ್ರದಾಯಿಕ ಸಾಂಸ್ಕ ತಿಕ ಆಚರಣೆಗಳಲ್ಲಿ ಈ ಸಾಮಾಜೀಕರಣಗೊಂಡ ಚಿಂತನೆಯನ್ನೇ ಸಾಂಸ್ಥೀಕರಣಗೊಳಿಸಲಾಗಿದ್ದು, ಇದು ಸಮಾಜದ ಎಲ್ಲ ಸ್ತರಗಳನ್ನೂ, ಎಲ್ಲ ವಲಯಗಳನ್ನೂ ತಲುಪಿರುವುದು ವಾಸ್ತವ. ಹಾಗಾಗಿಯೇ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಅಥವಾ ಮಾಂಸಾಹಾರವನ್ನು ಒದಗಿಸುವುದಕ್ಕೆ ಸಾಂಪ್ರದಾಯಿಕ ಸಮಾಜದಿಂದ ತೀವ್ರ ವಿರೋಧವೂ ವ್ಯಕ್ತವಾಗುತ್ತಿದೆ. ಮಂಡ್ಯದ ಜನತೆ ತಮ್ಮ ನೆಲದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ ಸ್ಥಳೀಯ ಪ್ರಧಾನ ಆಹಾರ ಸಂಸ್ಕ ತಿಗೆ ಅವಕಾಶವನ್ನು ಅಪೇಕ್ಷಿಸುವುದು ತಪ್ಪೇನಲ್ಲ. ಸಾಹಿತ್ಯ ಪರಿಷತ್ತು ಮತ್ತು ಸಾಹಿತ್ಯ ಸಮ್ಮೇಳನದ ಆಯೋಜಕರು ಇದಕ್ಕೆ ಕೂಡಲೇ ಸಮ್ಮತಿಸಬಹುದಿತ್ತು. ಆದರೆ ಮಾಂಸಾಹಾರವನ್ನೇ ನಿಷೇಧಿಸುವಂತೆ ವರ್ತಿಸಿರುವುದು ಅಕ್ಷಮ್ಯ. ಇದು ಭಾರತದ ಬಹುಸಂಸ್ಕ ತಿಗೆ ವ್ಯತಿರಿಕ್ತವಾದ ಒಂದು ಧೋರಣೆ. ಕನ್ನಡ ಭಾಷಿಕರಿಗೆ ನಾನಾ ವಿಧವಾದ ಆಹಾರ ಪದ್ಧತಿಗಳಿವೆ. ಆದರೆ ಒಂದು ಭಾಷೆಯಾಗಿ ಕನ್ನಡಕ್ಕೆ ಆಹಾರ ಸಂಸ್ಕ ತಿಯನ್ನು ಆರೋಪಿಸಲಾಗುವುದಿಲ್ಲ. ಸಮಾಜದಲ್ಲಿ ಪ್ರಚಲಿತವಾಗಿರುವ ಎಲ್ಲ ಆಹಾರ ಪದ್ಧತಿಗಳಿಗೂ ಮಾನ್ಯತೆ ನೀಡುವುದು ಸಾಹಿತ್ಯ ಸಮ್ಮೇಳನದ ಆಯೋಜಕರ ನೈತಿಕ ಕರ್ತವ್ಯ. ಎಲ್ಲ ಸಾಹಿತ್ಯ ಸಮ್ಮೇಳನಗಳಲ್ಲಿ ಸಾಮಾನ್ಯವಾಗಿ ಆಹಾರ ವೈವಿಧ್ಯತೆಯನ್ನು ಮೇಳೈಸಲಾಗುತ್ತದೆ. ಇದು ಸಹಜವೂ ಹೌದು ಅಗತ್ಯವೂ ಹೌದು. ಹಾಗೆಯೇ ಮಾಂಸಾಹಾರವೂ ಇದೇ ವೈವಿಧ್ಯತೆಯ ಒಂದು ಭಾಗ ಎನ್ನುವುದನ್ನು ಆಯೋಜಕರು ಮತ್ತು ಸಮಾಜ ಮನಗಾಣಬೇಕಲ್ಲವೇ?

ಸಾಹಿತ್ಯ ಲೋಕದ ಜವಾಬ್ದಾರಿ : ಸಾಹಿತ್ಯ ಸಮ್ಮೇಳನದ ಪೂರ್ವಭಾವಿಯಾಗಿ ಹೊರಡಿಸಿರುವ ನಿಬಂಧನೆಗಳಲ್ಲಿ ‘ಸಮ್ಮೇಳನದಲ್ಲಿ ವಾಣಿಜ್ಯ ಮತ್ತು ಪುಸ್ತಕ ಮಳಿಗೆಗಳನ್ನು ಕಾಯ್ದಿರಿಸಲಾಗಿದೆ ಮಾಂಸಾಹಾರವನ್ನು ನಿಷೇಽಸಲಾಗಿದೆ’ ಎಂದು ನಮೂದಿಸಿರುವುದು ಇಷ್ಟೆಲ್ಲಾ ಹಗರಣಗಳಿಗೆ ಕಾರಣವಾಗಿದೆ. ಈ ರೀತಿಯ ಆಲೋಚನೆಯೇ ಒಂದು ಆಹಾರ ಪದ್ಧತಿಯನ್ನು ಹಾಗೂ ಅದನ್ನು ಅನುಸರಿಸುವವರನ್ನು ಅವಮಾನಿಸಿದಂತೆ. ಯಾವುದೇ ಸಾರ್ವಜನಿಕ ಸಮಾರಂಭ ಗಳಲ್ಲಾದರೂ ಆಹಾರ ಪದ್ಧತಿಯನ್ನು ನಿಷೇಽಸುವುದು ನಮ್ಮೊಳಗಿನ ಸಾಂಪ್ರದಾಯಿಕತೆಯನ್ನು ಎತ್ತಿ ತೋರುತ್ತದೆ. ನಾಡಿನ ಸಮಸ್ತ ಜನತೆಯನ್ನೂ ಒಳಗೊಂಡು ನಡೆಸುವ ಸಾರ್ವಜನಿಕ ಸಮಾರಂಭ ಗಳಲ್ಲಿ, ಸಮ್ಮೇಳನಗಳಲ್ಲಿ ಈ ರೀತಿಯ ನಿಬಂಧನೆಗಳನ್ನು ವಿಽಸುವುದು ಬಹುಸಂಸ್ಕ ತಿಗೆ ಧಕ್ಕೆ ಉಂಟುಮಾಡುತ್ತದೆ. ಮಾಂಸಾಹಾರವಾಗಲೀ ಸಸ್ಯಾಹಾರವಾಗಲೀ ಅದು ವೈಯಕ್ತಿಕ ಅಭಿರುಚಿ ಮತ್ತು ವ್ಯಕ್ತಿಗತ ಆಯ್ಕೆಗೆ ಬಿಟ್ಟ ವಿಚಾರ. ಈ ಅಭಿರುಚಿ ಸ್ವಾತಂತ್ರ್ಯಕ್ಕೆ ಸಾರ್ವಜನಿಕವಾಗಿ ಮಿತಿಗಳನ್ನು ವಿಽಸುವುದು ಪ್ರಜಾತಂತ್ರದ ಲಕ್ಷಣವಲ್ಲ. ಇಂತಹ ಸಾಂಪ್ರದಾಯಿಕತೆಯನ್ನು ಪ್ರಶ್ನಿಸುವುದು ಸಾಹಿತ್ಯ ವಲಯದ ಪ್ರಥಮ ಆದ್ಯತೆಯೂ, ನೈತಿಕ ಕರ್ತವ್ಯವೂ ಆಗಬೇಕಿದೆ. ಏಕೆಂದರೆ ಸಾಹಿತ್ಯ ಕೇವಲ ಅಕ್ಷರಗಳ ಭಂಡಾರ ಮಾತ್ರವೇ ಅಲ್ಲ. ಭಾರತದಂತಹ ಬಹುಸಾಂಸ್ಕ ತಿಕ ನಾಡಿನಲ್ಲಿ ಭಾಷೆ ಜನಸಮುದಾಯಗಳ ಅಸ್ಮಿತೆಯ ಗಡಿಗಳನ್ನು ದಾಟಿ ಒಂದಾಗಿಸುವ ಒಂದು ಅಭಿವ್ಯಕ್ತಿ ಮಾಧ್ಯಮ. ‘ನಾವು ಕನ್ನಡಿಗರು’ ಎಂದು ಹೆಮ್ಮೆಯಿಂದ ಎದೆತಟ್ಟಿಕೊಳ್ಳುವಾಗ ಉಳಿದೆಲ್ಲ ಅಸ್ಮಿತೆಗಳೂ ಹಿಂದೆ ಸರಿಯುತ್ತವೆ. ಸಾಹಿತ್ಯ ಎನ್ನುವುದು ಈ ಒಂದು ಪ್ರಕ್ರಿಯೆಯನ್ನು ಸಾಂಸ್ಥೀಕರಿಸುವ ಬೌದ್ಧಿಕ ನೆಲೆ ಎನ್ನುವುದನ್ನು ಕನ್ನಡ ಸಾಹಿತ್ಯ ಪರಿಷತ್ತು ಅರ್ಥಮಾಡಿಕೊಳ್ಳಬೇಕು.

ಭಾರತೀಯ ಸಮಾಜದ ಮೇಲೆ ಎಲ್ಲ ಸ್ತರಗಳಲ್ಲೂ ಸಾಂಪ್ರದಾಯಿಕತೆಯ ಛಾಯೆ ದಟ್ಟವಾಗಿರುವುದರಿಂದ ಅಲ್ಲಿಂದ ಉಗಮಿಸುವ ಮಡಿವಂತಿಕೆ ಮತ್ತು ಹೊರಗಿರಿಸುವ ಪ್ರವೃತ್ತಿಗಳೂ ಸಾಂಸ್ಥೀಕರಣಕ್ಕೊಳಗಾಗುತ್ತವೆ. ನಿಷೇಧ ಹೇರುವುದು ಈ ಪ್ರಕ್ರಿಯೆಯ ಪರಾಕಾಷ್ಠೆ ಎನ್ನಬಹುದು. ಈ ಸಾಂಪ್ರದಾಯಿಕತೆಯ ಪ್ರಭಾವದಿಂದಲೇ ಕನ್ನಡ ಸಾಹಿತ್ಯ ಪರಿಷತ್ತು ತನ್ನೊಳಗೆ ಅಂತರ್ಗತವಾಗಿರುವ ಪಿತೃಪ್ರಧಾನತೆ ಮತ್ತು ಒಂದು ಹಂತದ ಊಳಿಗಮಾನ್ಯ ಧೋರಣೆಯಿಂದ ಮುಕ್ತವಾಗಿಲ್ಲ. ಸಾಹಿತ್ಯ ಸಮ್ಮೇಳನ ಈ ಸಾಧ್ಯತೆಗಳನ್ನು ಮೀರಿ ನಡೆಯಬೇಕಿದೆ. ಅಕ್ಷರ ರೂಪದಲ್ಲಿ ಸಾಹಿತ್ಯವು ಪಡೆಯುವ ಸಾರ್ವತ್ರಿಕತೆಯನ್ನೇ ಸಾಹಿತ್ಯ ಸಮ್ಮೇಳನವೂ ಬಿಂಬಿಸುವುದು ಅತ್ಯವಶ್ಯ. ಆಗಲೇ ಸಮಾಜದ ಎಲ್ಲ ಸ್ತರಗಳ ಜನಸಮುದಾ ಯಗಳನ್ನೂ ಒಳಗೊಂಡಂತಹ ಒಂದು ಸೌಹಾರ್ದಯುತ ವಾತಾವರಣವನ್ನು, ಸಮನ್ವಯದ ಪರಿಸರ ವನ್ನು ನಿರ್ಮಿಸಲು ಸಾಧ್ಯ. ಈ ನಿಟ್ಟಿನಲ್ಲಿ ಬಹುದೊಡ್ಡ ತೊಡಕಾಗಿ ಎದುರಾಗಬಹುದಾದ ಆಹಾರ ಸಂಸ್ಕ ತಿಯ ಸುತ್ತಲಿನ ಸಾಂಪ್ರದಾಯಿಕತೆಯನ್ನು ಸಾಹಿತ್ಯ ಸಮ್ಮೇಳನವು ಭೇದಿಸಬೇಕಿದೆ. ಬದಲಾಗುತ್ತಿರುವ ಭಾರತಕ್ಕೆ ಇದು ಅತ್ಯವಶ್ಯವಾಗಿದೆ. ಜಾತಿ, ಮತ, ಧರ್ಮದ ಅಸ್ಮಿತೆಗಳು ಸಮಾಜವನ್ನು ಲಂಬಗತಿಯಲ್ಲಿ ಮತ್ತು ಸಮತಲವಾಗಿ ವಿಘಟನೆಗೊಳಪಡಿಸುತ್ತಲೇ ಇರುವ ವರ್ತಮಾನದ ಸನ್ನಿವೇಶದಲ್ಲಿ ಈ ವೈಕಲ್ಯವನ್ನು ತಪ್ಪಿಸಿ ಸಮಾಜವನ್ನು ಒಂದುಗೂಡಿಸುವ ಗುರುತರ ಜವಾಬ್ದಾರಿ ಸಾಹಿತ್ಯ ವಲಯದ ಮೇಲಿರುವುದನ್ನು ಯಾರಿಂದಲೂ ಅಲ್ಲಗಳೆಯಲಾಗುವುದಿಲ್ಲ. ಬಹುಸಂಖ್ಯಾವಾದ ಪ್ರಬಲ ವಾಗುತ್ತಿರುವ ಕಾಲಘಟ್ಟದಲ್ಲಿ ಇದು ಹಿನ್ನೆಲೆಗೆ ಸರಿಯುತ್ತಿರುವುದನ್ನೂ ನಿರ್ಲಕ್ಷಿಸಲಾಗುವುದಿಲ್ಲ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಮಂಡ್ಯದ ಕನ್ನಡ ಸಾಹಿತ್ಯ ಸಮ್ಮೇಳನ ಆಹಾರ ಸಂಸ್ಕತಿಯನ್ನು, ಆಹಾರದ ಹಕ್ಕಿನ ಪ್ರಶ್ನೆಯನ್ನು ಮುನ್ನೆಲೆಗೆ ತಂದಿರುವುದು ಸ್ವಾಗತಾರ್ಹ. ಸಮಾಜದ ಬಹುಸಂಖ್ಯಾತ ವರ್ಗದ ಈ ಆಗ್ರಹಗಳಿಗೆ ಮಾನ್ಯತೆ ನೀಡುವುದು ಸಮ್ಮೇಳನದ ಆಯೋಜಕರ ಹಾಗೂ ಇಡೀ ಸಮಾಜದ ನೈತಿಕ ಹಾಗೂ ಸಾಂವಿಧಾನಿಕ ಕರ್ತವ್ಯ.

ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡದ ಸಾಹಿತ್ಯ ಲೋಕ ಈ ಬಹುಸಾಂಸ್ಕ ತಿಕ ಬೇಡಿಕೆಗೆ ಮನ್ನಣೆ ನೀಡಿ ತನ್ನ ಸಾಹಿತ್ಯಕ ನೈತಿಕತೆಯನ್ನು, ಸಾಂವಿಧಾನಿಕ ಬದ್ದತೆಯನ್ನು, ಸಾಮಾಜಿಕ ಕರ್ತವ್ಯವನ್ನೂ ನಿಭಾಯಿಸುತ್ತದೆ ಎಂದು ಆಶಿಸೋಣ.

 

Tags:
error: Content is protected !!