ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಜಂಬೂಸವಾರಿಗೆ ಕೌಂಟ್‌ಡೌನ್ ಶುರುವಾಗಿದೆ. ಈ ಬಾರಿ ಅಂಬಾವಿಲಾಸ ಅರಮನೆ ಆವರಣದಲ್ಲಿ 48 ಸಾವಿರ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ.
ಇನ್ನು ಪಾಸ್ ಇದ್ದವರಿಗೆ ಮಾತ್ರ ಅರಮನೆ ಒಳಭಾಗ ಪೊಲೀಸ್ ಭದ್ರತೆ ಕೂಡ ಹೆಚ್ಚಳ ಮಾಡಲಾಗಿದೆ. ಸಿಎಂ ಸೇರಿದಂತೆ ಹಲವು ಕ್ಯಾಬಿನೆಟ್ ಸಚಿವರು ಕೂಡ ಜಂಬೂಸವಾರಿಯಲ್ಲಿ ಭಾಗಿಯಾಗಲಿದ್ದಾರೆ.
ಗಣ್ಯರು, ಅಧಿಕಾರಿಗಳು, ಸಾರ್ವಜನಿಕರು, ರಾಜಮನೆತನದ ಕುಟುಂಬಸ್ಥರು, ನ್ಯಾಯಾಧೀಶರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದೆ.
ಇನ್ನು ಅಂಬಾರಿ ಹೊರುವ ರಾಜಮಾರ್ಗ ಸೇರಿದಂತೆ ನಗರ ವ್ಯಾಪ್ತಿಯಲ್ಲಿ ಹೆಚ್ಚಿನ ಸಿಸಿ ಕ್ಯಾಮರಾಗಳನ್ನು ಅಳವಡಿಕೆ ಮಾಡಲಾಗಿದ್ದು, ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ.
ಅಲ್ಲದೇ ಅಂಬಾರಿ ಸಾಗುವ ಮಾರ್ಗದುದ್ದಕ್ಕು ರಸ್ತೆ ಬದಿ ತಾತ್ಕಾಲಿಕ ತಡೆಗೋಡೆ ನಿರ್ಮಾಣ ಮಾಡಲಾಗಿದ್ದು, ಅಂಬಾರಿ ಸಾಗುವಾಗ ಜನ ದಾಟಿ ರಸ್ತೆಗೆ ಬಾರದಂತೆ ಕ್ರಮ ವಹಿಸಲಾಗಿದೆ.
ಒಟ್ಟಾರೆಯಾಗಿ ಅಂಬಾರಿ ಹೊತ್ತು ಸಾಗುವ ಅಭಿಮನ್ಯು ರಾಜಗಾಂಭೀರ್ಯದೊಂದಿಗೆ ತಾಯಿ ಚಾಮುಂಡೇಶ್ವರಿ ಆಶೀರ್ವಾದಕ್ಕೂ ಜನ ಕಾತುರದಿಂದ ಕಾಯುತ್ತಿದ್ದಾರೆ.





