ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ ಕ್ಷಣಕ್ಷಣನೆ ಆರಂಭವಾಗಿದ್ದು, ಜಂಬೂಸವಾರಿಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಮಂದಿ ರಸ್ತೆ ಬದಿಗಳಲ್ಲಿ ಕಿಕ್ಕಿರಿದು ಸೇರಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು, ಮಧ್ಯಾಹ್ನ 1.41 ರಿಂದ 2.10 ಗಂಟೆಯ ವೇಳೆಗೆ ಮಕರ ಲಗ್ನದಲ್ಲಿ ಜರುಗುವ ನಂದಿ ಕಂಬಕ್ಕೆ ಪೂಜೆ ಸಲ್ಲಿಸಿದ್ದು, ನಂತರ ಸಂಜೆ 4 ರಿಂದ 4.30 ಗಂಟೆಯೊಳಗೆ ಸಲ್ಲುವ ಕುಂಭ ಲಗ್ನದಲ್ಲಿ ಜಂಬೂಸವಾರಿಗೆ ಚಾಲನೆ ನೀಡಲಿದ್ದಾರೆ.
ವಿಶ್ವವಿಖ್ಯಾತ ಜಂಬೂಸವಾರಿಯ ಸಲುವಾಗಿ ಅಭಿಮನ್ಯು ಆನೆ 750 ಕೆ.ಜಿ ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಹೊತ್ತು ರಾಜ ಗಾಂಭೀರ್ಯದಿಂದ ರಾಜಬೀದಿಗಳಲ್ಲಿ ಹೆಜ್ಜೆ ಹಾಕಲಿದಾನೆ. ಈ ಐತಿಹಾಸಿಕ ಕ್ಷಣವನ್ನು ದೇಶ-ವಿದೇಶ ಮತ್ತು ನೆರೆಹೊರೆಯ ಜಿಲ್ಲೆಯ ಲಕ್ಷಾಂತರ ಮಂದಿ ಕಣ್ತುಂಬಿಕೊಳ್ಳಲು ರಾಜ ಬೀದಿಗಳಲ್ಲಿ ಕಿಕ್ಕಿರಿದು ಸೇರಿದ್ದಾರೆ.
ಈ ಜಂಬೂಸವಾರಿ ವೀಕ್ಷಣೆಗೆ ಅರಮನೆಯ ಆವರಣದಲ್ಲಿ 40 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ. ಆದರೂ ಅರಮನೆಯ ಬಳಿಕ ಚಿಕ್ಕ ಗಡಿಯಾರ, ಕೆ.ಆರ್.ಆಸ್ಪತ್ರೆ ಹಾಗೂ ಬನ್ನಿಮಂಟಪದ ರಸ್ತೆಗಳಲ್ಲಿ ಜನ ದಟ್ಟಣೆ ಹೆಚ್ಚಾಗಿದೆ.
ಅಷ್ಟೇ ಅಲ್ಲದೇ ಜಂಬೂಸವಾರಿ ಸಾಗುವ ಸಮಯದಲ್ಲಿ ಸಾರ್ವಜನಿಕರು ಡಾ.ರಾಜ್‌ಕುಮಾರ್ ಪಾರ್ಕ್‌ನ ಮರಗಳ ಮೇಲೆ ಹಾಗೂ ಕಟ್ಟಡಗಳ ಮೇಲೆ ನಿಂತು ವೀಕ್ಷಿಸುವ ಕಾತುರದಲ್ಲಿ ಕಾಯುತ್ತಿದ್ದಾರೆ.
ಇನ್ನು ಮೈಸೂರಿನಲ್ಲಿ ಬೆಳಿಗ್ಗೆಯಿಂದಲೂ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನದ ವೇಳೆಗೆ ಜಿಟಿ ಜಿಟಿ ಮಳೆ ಶುರುವಾಗಿದೆ. ಆದರೂ ಮಳೆಯ ನಡುವೆಯೂ ಜನತೆ ಜಂಬೂಸವಾರಿ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ರಸ್ತೆಗಳಲ್ಲಿ ಕಿಕ್ಕಿರಿದು ಸೇರಿದ್ದಾರೆ.