ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಂಭ್ರಮ ಮನೆಮಾಡಿದ್ದು, ಇಂದು ನಾನಾ ಜಿಲ್ಲೆಗಳಿಂದ ಆಗಮಿಸಿದ್ದ ದಂಪತಿಗಳು ವಿವಿಧ ಪ್ರಕಾರ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಟಾಂಗಾ ಸಾರೋಟ್ ಸವಾರಿ ನಡೆಸಿದರು.
ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ರಂಗಚಾರ್ಲು ಪುರಭವನದ ಆವರಣದಲ್ಲಿ ನಡೆದ ಪಾರಂಪರಿಕ ಉಡುಗೆಯಲ್ಲಿ ದಂಪತಿಗಳಿಗೆ ಟಾಂಗಾ ಸವಾರಿಯನ್ನು ಜೋಡಿಗಳಿಗೆ ಬಾಗಿನ ಕೊಡಲಾಯಿತು. ಈ ಮೂಲಕ ಟಾಂಗಾ ಸವಾರಿ ಪ್ರಾರಂಭ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯುಕ್ತ ದೇವರಾಜು ಅವರು, ನಮ್ಮ ಇಲಾಖೆಯು ಪರಂಪರೆಯನ್ನು ರಕ್ಷಿಸುವ ಕೆಲಸ ಮಾಡುತ್ತಿದೆ. ಈ ಮೂಲಕ ಅದನ್ನು ಹೆಚ್ಚು ಜನರಿಗೆ ತಲುಪಿಸುವ ಕೆಲಸ ಆಗುತ್ತಿದೆ.
ಮೈಸೂರು ಎಂದರೆ ಟಾಂಗಾ, ಟಾಂಗಾ ಎಂದರೆ ಮೈಸೂರು ಎಂಬ ಪ್ರತೀತಿ ಇದೆ. ಹಾಗಾಗಿ ಸಾಂಪ್ರದಾಯಿಕ ಉಡುಗೆ ಮತ್ತು ಟಾಂಗಾ ಸವಾರಿ ಇವೆರಡನ್ನು ಒಂದುಗೂಡಿಸಿ ಪಾರಂಪರಿಕ ದಸರಾವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಇನ್ನು ಟಾಂಗಾ ಸವಾರಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ದಂಪತಿಗಳು ಆಯಾಯ ಜಿಲ್ಲೆಗಳ ಸಾಂಪ್ರದಾಯಿಕ ಉಡುಗೆಯ ಮೂಲಕ ಕಣ್ಮನ ಸೆಳೆದರು.