ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಗೆ ಕೇವಲ ನಾಲ್ಕು ದಿನಗಳು ಬಾಕಿಯಿದ್ದು, ಸ್ವಚ್ಛತೆಗೆಂದೇ ಸ್ವಚ್ಛತಾ ಕಾರ್ಮಿಕರು ಸನ್ನದ್ಧರಾಗಿದ್ದಾರೆ.
ಕಂಡ ಕಂಡಲ್ಲಿ ಸಿಗುವ ಕಸವನ್ನು ಹೆಕ್ಕಿ ತೆಗೆಯುವ ಮೂಲಕ ದಸರೆ ವೇಳೆ ಮೈಸೂರು ನಗರವನ್ನು ಕಸಮುಕ್ತವನ್ನಾಗಿಸಲು ಸ್ವಚ್ಛತಾ ಕಾರ್ಮಿಕರು ಹಗಲಿರುಳು ಶ್ರಮ ವಹಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ದಸರಾ ಮಹೋತ್ಸವದ ಪ್ರಯುಕ್ತ ಮೈಸೂರು ನಗರದ ಸ್ವಚ್ಛತೆಗೆ 500 ಮಂದಿ ಹೆಚ್ಚುವರಿ ಸ್ವಚ್ಛತಾ ಕಾರ್ಮಿಕರು ರಸ್ತೆಗಿಳಿಯಲಿದ್ದಾರೆ.
ಮೂರು ಪಾಳಿಯಲ್ಲಿ ಸತತ 15 ದಿನಗಳ ಕಾಲ ಮೈಸೂರು ನಗರದ ಸ್ವಚ್ಛತಾ ಕಾರ್ಯದಲ್ಲಿ ಕಾರ್ಮಿಕರು ಭಾಗವಹಿಸಲಿದ್ದಾರೆ.
ಈ ಮೂಲಕ ದಸರಾ ವೇಳೆಯಲ್ಲಿ ಬರೋಬ್ಬರಿ 2500 ಮಂದಿ ಪೌರ ಕಾರ್ಮಿಕರು ಮೈಸೂರು ನಗರದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ.
ಇನ್ನು ಸ್ವಚ್ಛತಾ ಕಾರ್ಯಕ್ಕೆ 60 ವಾಹನಗಳನ್ನು ನೀಡಲಾಗುತ್ತಿದ್ದು, ಇದರೊಂದಿಗೆ ರಿಂಗ್ ರಸ್ತೆ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಕ್ಕೆಂದೇ 9 ಜೆಸಿಬಿಗಳನ್ನು ಸಹ ಬಳಕೆ ಮಾಡಿಕೊಳ್ಳಲಾಗುತ್ತಿದೆ.