ಮೈಸೂರು: ನೂತನ ವರ್ಷವನ್ನು ಬರಮಾಡಿಕೊಳ್ಳಲು ಜನರು ಕಾತುರದಿಂದ ಕಾಯುತ್ತಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಜನತೆ ಎಲ್ಲಾ ಸಿದ್ಧತೆ ಕೈಗೊಂಡಿದ್ದಾರೆ.
ಹೊಸ ವರ್ಷ 2025ರ ಮೊದಲ ದಿನ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎರಡು ಲಕ್ಷ ಲಾಡುಗಳ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಮೈಸೂರಿನ ವಿಜಯನಗರದಲ್ಲಿರುವ ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ನೂತನ ವರ್ಷದ ಮೊದಲ ದಿನ ಎರಡು ಲಕ್ಷ ಲಾಡುಗಳನ್ನು ವಿತರಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕನ್ನಡದ ಮೇರುನಟ ಡಾ.ರಾಜ್ ಕುಮಾರ್ ಅವರ ಪ್ರೇರಣೆಯಿಂದ ಕಳೆದ 1994ರಲ್ಲಿ ಒಂದು ಸಾವಿರ ಲಾಡುಗಳ ವಿತರಣೆಯೊಂದಿಗೆ ಆರಂಭವಾದ ಸೇವೆ, ವರ್ಷದಿಂದ ವರ್ಷಕ್ಕೆ ಲಾಡುಗಳ ವಿತರಣೆಯಲ್ಲಿ ಹೆಚ್ಚಳವಾಗುತ್ತಿದೆ.
ನೂತನ ವರ್ಷದ ಮೊದಲ ದಿನ ದೇವಾಲಯಕ್ಕೆ ಭೇಟಿ ನೀಡುವ ಸಾರ್ವಜನಿಕರಿಗೆ ವಿತರಿಸಲು ತಿರುಪತಿ ಮಾದರಿಯಲ್ಲಿ ಲಡ್ಡುಗಳನ್ನು ತಯಾರಿ ಮಾಡಲಾಗಿದೆ.
ಸುಮಾರು 100 ಮಂದಿ ನುರಿತ ಬಾಣಸಿಗರು ಲಡ್ಡುಗಳನ್ನು ತಯಾರಿ ಮಾಡಿದ್ದು, 200 ಕ್ವಿಂಟಾಲ್ ಸಕ್ಕರೆ, ಕಡಲೆಹಿಟ್ಟು, ಬಾದಾಮಿ, ಪಿಸ್ತಾ, ಏಲಕ್ಕಿ, ದ್ರಾಕ್ಷಿ, ಗೋಡಂಬಿ, ತುಪ್ಪ, ಪಚ್ಚ ಕರ್ಪೂರ ಸೇರಿದಂತೆ ಇನ್ನಿತರ ಪದಾರ್ಥಗಳನ್ನು ಮಿಶ್ರಣ ಮಾಡಿ ಲಡ್ಡು ತಯಾರಿ ಮಾಡಲಾಗಿದೆ.





