Mysore
30
clear sky

Social Media

ಗುರುವಾರ, 13 ಫೆಬ್ರವರಿ 2025
Light
Dark

ಮುಡಾದ 300 ಕೋಟಿ ಆಸ್ತಿ ಜಪ್ತಿ ವಿಚಾರ| ಸಿಎಂ ಸಿದ್ದರಾಮಯ್ಯ ಹೆಸರು ದುರ್ಬಳಕೆ ಮಾಡಿ ಕಪ್ಪುಚುಕ್ಕೆ ತರುವ ಪ್ರಯತ್ನ: ಯತೀಂದ್ರ, ಎಚ್‌.ಸಿ.ಮಹದೇವಪ್ಪ

ಮೈಸೂರು: ಮುಡಾ ಹಗರಣದಲ್ಲಿ ಇ.ಡಿ.ಅಧಿಕಾರಿಗಳು 300 ಕೋಟಿ ಆಸ್ತಿ ಜಪ್ತಿ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಇದರಲ್ಲಿ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಕಪ್ಪುಚುಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಇಂದು(ಜನವರಿ.19) ಕುಂಭಮೇಳದ ಬಗ್ಗೆ ಸುದ್ದಿಗೋಷ್ಠಿ ಏರ್ಪಡಿಸಿದ್ದ ವೇಳೆ ಈ ವಿಚಾರದ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಮುಡಾದಲ್ಲಿ ನಿವೇಶನಗಳು ಹಂಚಿಕೆಯಾಗಿರುವುದು ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ, ಬಿಜೆಪಿ ನೇಮಕ ಮಾಡಿರುವ ಅಧಿಕಾರಿಗಳಿಂದಲೇ ಸೈಟ್‌ ಹಂಚಿಕೆಯಾಗಿದೆ. ಹೀಗಾಗಿ ಈ ಬಗ್ಗೆಯೂ ಇ.ಡಿ.ಅಧಿಕಾರಿಗಳು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನೂ ಇ.ಡಿ. ತನಿಖಾ ಸಂಸ್ಥೆಯೂ ವಶಪಡಿಸಿಕೊಂಡಿದ್ದ ಮುಡಾದ 142 ನಿವೇಶನಗಳಿಗೂ, ಮುಡಾ ಪ್ರಕರಣದ 14 ನಿವೇಶನಗಳಿಗೂ ಸಂಬಂಧವಿಲ್ಲ. ನಾವು ಕಾನೂನಾತ್ಮಕವಾಗಿಯೇ ನಿವೇಶನಗಳನ್ನು ಪಡೆದಿದ್ದೇವೆ. ಆದರೆ ಇ.ಡಿ. ತನಿಖಾ ಸಂಸ್ಥೆಯವರು ಮೀಸ್‌ ಲೀಡ್‌ ಆಗಿ ಟ್ವೀಟ್‌ ಮಾಡಿದ್ದಾರೆ. ಅವರು ನಡೆಸಿರುವ ತನಿಖೆಯೇ ಬೇರೆ, ಅದರಲ್ಲಿ 14 ನಿವೇಶನಗಳ ಬಗ್ಗೆ ಉಲ್ಲೇಖವಿಲ್ಲ. ಆದರೂ ಅನಗತ್ಯವಾಗಿ ಸಿಎಂ ಅವರ ಹೆಸರನ್ನು ಎಳೆದು ತರಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಸಿ.ಮಹದೇವಪ್ಪ ಅವರು ಮಾತನಾಡಿ, ಸಿಎಂ  ಸಿದ್ದರಾಮಯ್ಯ ಅವರ ಹೆಸರಿಗೆ ಕಪ್ಪುಚುಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಮುಡಾ ಹಗರಣದ ಬಗ್ಗೆ ಲೀಗಲ್‌ ಟೀಂ ಎಲ್ಲವನ್ನೂ ಪರಿಶೀಲನೆ ಮಾಡುತ್ತಿದೆ. ಈ ವಿಚಾರ ಸರ್ಕಾರದ ಇಮೇಜ್‌ಗೆ ಮಸಿ ಬಳಿಯುವ ಯತ್ನವಾಗಿದೆ. ಈ ಬಗ್ಗೆ ನಾವು ಕಾನೂನುಬದ್ಧವಾಗಿ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.

Tags: