ಮೈಸೂರು: ರಾಜ್ಯದಲ್ಲಿ ತೀವ್ರ ಚರ್ಚೆಯಲ್ಲಿರುವ ಜಾತಿಗಣತಿ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರತಿಕ್ರಿಯೆ ನೀಡಿದ್ದು, ಜಾತಿಗಣತಿಗೆ ನಮ್ಮ ತಕರಾರಿಲ್ಲ. ಆದರೆ ಅದು ವೈಜ್ಞಾನಿಕವಾಗಿ ಆಗಬೇಕು ಎಂದು ಹೇಳಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಗಣತಿ ಅವೈಜ್ಞಾನಿಕ ಎಂದು ಈಗಾಗಲೇ ಹೇಳಿದ್ದೇವೆ. ಜಾತಿಗಣತಿ ವೈಜ್ಞಾನಿಕವಾಗಿ ಆಗಬೇಕು. ಈ ಬಗ್ಗೆ ಸರ್ಕಾರ ಏನು ಮಾಡುತ್ತದೆ ನೋಡೋಣ. 10 ವರ್ಷದ ಹಿಂದಿನ ಗಣತಿಯನ್ನು ಈಗ ಬಿಡುಗಡೆ ಮಾಡಲು ಹೊರಟಿದ್ದಾರೆ. ಅದು ಸರಿಯಲ್ಲ ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದಾರೆ. ಜಾತಿಗಣತಿಯನ್ನು ರಾಜಕೀಯವಾಗಿ ಎಲ್ಲರೂ ಬಳಕೆ ಮಾಡಿಕೊಳ್ಳುವುದು ಗೊತ್ತಿರುವ ವಿಚಾರ. ಆದರೆ ಸರಿಯಾದ ರೀತಿಯಲ್ಲಿ ಗಣತಿ ಆಗಬೇಕು ಎಂದರು.
ಇನ್ನು ವೀರಶೈವ ಲಿಂಗಾಯತ ಮಹಾಸಭಾದಿಂದ ಪ್ರತ್ಯೇಕ ಜಾತಿಗಣತಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಸಂವಿಧಾನದಲ್ಲಿ ಸಮುದಾಯದ ಗಣತಿಗೆ ಅವಕಾಶ ಇದೆ. ಅದೇ ರೀತಿ ವೀರಶೈವ ಲಿಂಗಾಯತ ಮಹಾಸಭಾ ಜಾತಿಗಣತಿ ಮಾಡಲು ಮುಂದಾಗಿದೆ. ಇದಕ್ಕಾಗಿ ಸಂವಿಧಾನದಲ್ಲಿ ಅವಕಾಶ ಮಾಡಬಹುದು ಎಂದು ಅಭಿಪ್ರಾಯ ಪಟ್ಟರು.





