ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಿನ್ನೆ ತಾನೇ ಮೈಸೂರಿಗೆ ಆಗಮಿಸಿರುವ ಗಜಪಡೆ ಆಗಸ್ಟ್.10ರಂದು ಅರಮನೆಗೆ ಪ್ರವೇಶಿಸಲಿವೆ.
ಆಗಸ್ಟ್.10ರ ಭಾನುವಾರ ಸಂಜೆ 6.45 ರಿಂದ 7.20ರ ಗೋಧೊಳಿ ಲಗ್ನದಲ್ಲಿ ದಸರಾ ಗಜಪಡೆಗಳು ಅರಮನೆಗೆ ಎಂಟ್ರಿ ಆಗಲಿವೆ. ಅರಮನೆಯ ಪೂರ್ವ ದಿಕ್ಕಿನಲ್ಲಿರುವ ಜಯಮಾರ್ತಾಂಡ ದ್ವಾರದಿಂದ ಗಜಪಡೆಗಳು ಅರಮನೆ ಪ್ರವೇಶಿಸಲಿದ್ದು, ಇದನ್ನು ಸಾರ್ವಜನಿಕರು ಕೂಡ ಕಣ್ತುಂಬಿಕೊಳ್ಳಬಹುದಾಗಿದೆ.
ಈಗಾಗಲೇ ಅರಮನೆ ಆವರಣದಲ್ಲಿ ದಸರಾ ಗಜಪಡೆಗಳು, ಮಾವುತರು ಹಾಗೂ ಕಾವಾಡಿಗರ ವಾಸ್ತವ್ಯಕ್ಕೆ ಎಲ್ಲಾ ಸಿದ್ಧತೆ ಮಾಡಲಾಗಿದ್ದು, ಭಾನುವಾರದಿಂದ ನಾಡಹಬ್ಬ ದಸರಾ ಮಹೋತ್ಸವ ಮುಗಿಯುವವರೆಗೂ ಆನೆಗಳು ಅರಮನೆ ಆವರಣದಲ್ಲೇ ಬೀಡುಬಿಡಲಿವೆ.
ನಿತ್ಯ ಬೆಳಿಗ್ಗೆ ಹಾಗೂ ಸಂಜೆ ದಸರಾ ಗಜಪಡೆಗೆ ತಾಲೀಮು ನಡೆಸಲಾಗುತ್ತದೆ. ವಿಜಯದಶಮಿ ಜಂಬೂಸವಾರಿ ದಿನದಂದು ಕ್ಯಾಪ್ಟನ್ ಅಭಿಮನ್ಯು 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತು ರಾಜಬೀದಿಯಲ್ಲಿ ಹೆಜ್ಜೆ ಹಾಕಲಿದ್ದಾನೆ.





