Mysore
28
scattered clouds

Social Media

ಗುರುವಾರ, 11 ಡಿಸೆಂಬರ್ 2025
Light
Dark

ಪರಿಸರ ಸಂರಕ್ಷಣೆ ಬಗ್ಗೆ ಜಾಗೃತರಾಗಬೇಕು : ಡಾ.ಚಮರಂ

da chamaram

ಪರಿಸರವಾದಿ ಅಂಬೇಡ್ಕರ್‌ ವಿಚಾರಗೋಷ್ಠಿಯಲ್ಲಿ ಸಲಹೆ

ಮೈಸೂರು: ಪರಿಸರವಿಲ್ಲದೆ ಜೀವಿಗಳಿಲ್ಲ. ಸೂಕ್ಷ ಜೀವಿಯಿಂದ ಹಿಡಿದು, ಪ್ರಾಣಿ, ಪಕ್ಷಿ ಸಂಕುಲ, ಮಾನವರನ್ನು ಒಳಗೊಂಡಂತೆ ಎಲ್ಲರಿಗೂ ಬದುಕಲು ಸಸ್ಯ ಪ್ರಪಂಚ ಅತ್ಯಗತ್ಯ. ಗಿಡಮರ ಇಲ್ಲದಿದ್ದಲ್ಲಿ ಬದುಕಲು ಸಾಧ್ಯವಿಲ್ಲ. ಹಾಗಾಗಿ, ಗಿಡ ಮರಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲರೂ ಜಾಗೃತರಾಗಬೇಕಿದೆ ಎಂದು ಸಸ್ಯ ವಿಜ್ಞಾನ ಶಾಸ್ತ್ರ ಸಹಾಯಕ ಅಧ್ಯಾಪಕ ಡಾ.ಕೃಷ್ಣಮೂರ್ತಿ ಚಮರಂ ಹೇಳಿದರು.

ಇನ್ಸ್‌ಟಿಟ್ಯೂಟ್ ಆಫ್ ಸೋಷಿಯಲ್ ವರ್ಕರ್ಸ್ ಫಾರ್ ಆಕ್ಷನ್ ರೀಸರ್ಚ್ ಹಾಗೂ ಸಂಜೀವಯ್ಯ ಮೆಮೋರಿಯಲ್ ಎಜುಕೇಶನ್ ಸೊಸೈಟಿ ಸಹಯೋಗದೊಂದಿಗೆ ಸಿದ್ದೇಶ್ವರ ಪ್ರೌಢಶಾಲೆ ಸಭಾಂಗಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ʻಪರಿಸರವಾದಿ ಅಂಬೇಡ್ಕರ್’ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

ಗಾಂಧಿಜೀ ಉಪ್ಪಿನ ಸತ್ಯಾಗ್ರಹ ನಡೆಸಿದಂತೆ, ಡಾ.ಅಂಬೇಡ್ಕರ್ ಅವರು ನೀರಿಗಾಗಿ ಚಳುವಳಿ ನಡೆಸಿದ್ದರು. ಅದು ದಲಿತರು ಮುಟ್ಟುವಂತಿಲ್ಲ ಅನ್ನುವ ಜಾತಿವಾದಿಗಳ ವಿರುದ್ಧ ಮಹಾಡ್ ನ ಚೌಡಾರ್ ಕೆರೆ ಹೋರಾಟ ನಡೆಸಿದ ಮಹೋನ್ನತ ಚಳುವಳಿ ಆಗಿತ್ತು ಎಂದರು.

ನೀರಿನ ಚಳುವಳಿ ಆರಂಭಿಸಿದ್ದ ಅಂಬೇಡ್ಕರ್‌
ನಿಸರ್ಗವೇ ನೀಡುವ ಸಂಪನ್ಮೂಲ ಎಂದರೆ ಗಾಳಿ, ನೀರು, ಬೆಳಕು. ಇದನ್ನ ಪಡೆಯಲು ಎಲ್ಲರೂ ಅರ್ಹರೆ ಇದಕ್ಕೆ ಪ್ರತ್ಯೇಕ ಮಾನದಂಡ ಇಲ್ಲ. ಇದೆಲ್ಲವೂ ನಿಸರ್ಗದತ್ತವಾದದ್ದು ಯಾರಪ್ಪಣೆಯ ಅಗತ್ಯತೆ ಇಲ್ಲ. ಹೀಗಿದ್ದರೂ ಬ್ರಾಹ್ಮಣ ಶಾಹಿ ವ್ಯವಸ್ಥೆ, ಮೇಲ್ವರ್ಗದ ಜನ ಜಾತಿ ಹೆಸರಿನಲ್ಲಿ ನಿಸರ್ಗ ಮೂಲದ ಸಂಪನ್ಮೂಲಗಳನ್ನು ಮುಟ್ಟಲು ಬಿಡುತ್ತಿರಲಿಲ್ಲ. ಇದನ್ನೆಲ್ಲಾ ಖಂಡಿಸಿ ನೀರನ್ನು ಮುಟ್ಟುವ ಮೂಲಕ ಚಳುವಳಿಯನ್ನು ಆರಂಭಿಸಿದ್ದೇ ಅಂಬೇಡ್ಕರ್ ಅವರು ಎಂದರು.

ಅಂಬೇಡ್ಕರ್‌ ಕೆಲಸವನ್ನು ಮರೆಮಾಚಲಾಗಿದೆ
ಭಾಕ್ರನಂಗಲ್ ಆಣೆಕಟ್ಟಿಗೆ ಅಡಿಗಲ್ಲು ಹಾಕಿದರು. ಮಹಾನದಿಗೆ ಆಣೆಕಟ್ಟು ಕಟ್ಟಿಸಿದರು. ಅಂದಿನ ಬ್ರಿಟಿಷ್ ಸರ್ಕಾರದಲ್ಲಿ ಅಂದರೆ ಸ್ವತಂತ್ರ ಪೂರ್ವದಲ್ಲಿ ಕಾರ್ಮಿಕ ಹಾಗೂ ನೀರಾವರಿ ಸಚಿವರಾಗಿ ಕೆಲಸ ಮಾಡಿದರು. ಇದು ದೇಶದ ಜನರಿಗೆ ತಿಳಿದಿಲ್ಲ, ತಿಳಿಯದಂತೆ ಮರೆ ಮಾಚಲಾಗಿದೆ. ಪ್ರತಿ ಜೀವಿಗೂ ಜೀವಿಸುವ ಹಕ್ಕಿದೆ. ಅದರ ಆವಾಸ ಸ್ಥಾನ ಕಸಿದುಕೊಳ್ಳಲು ಯಾರಿಗೂ ಹಕ್ಕಿಲ್ಲ. ಯಾವಾಗ ಪ್ರಾಣಿ, ಪಕ್ಷಿ ಅದರ ವಾಸ ಸ್ಥಾನವನ್ನು ಮನುಷ್ಯ ಬಲವಂತವಾಗಿ ಕಸಿದುಕೊಳ್ಳುತ್ತಾನೆ ಆಗ ಅಸಮತೋಲನ ಕಾಡುತ್ತೆ ಆಗಲೇ ಪ್ರಾಣಿ ಹಾಗೂ ಮಾನವ ಸಂಘರ್ಷಕ್ಕೆ ದಾರಿಯಾಗುತ್ತೆ ಎಂದು ಹೇಳಿದರು.

ಅಂದೇ ಅಂಬೇಡ್ಕರ್ ಅವರು ಗೋಮಾಳ, ಹುಲ್ಲುಗಾವಲು ಮತ್ತಿತರ ಕೃಷಿಯೇತರ ಜಾನುವಾರ ಪೂರಕ ವಿಚಾರಗಳನ್ನು ತಂದಿದ್ದರು. ಬಾಬಾ ಸಾಹೇಬರು ವಕೀಲರು, ಪತ್ರಕರ್ತರು, ಸಂವಿಧಾನ ಶಿಲ್ಪಿ, ರಾಜಕಾರಣಿ, ಹೋರಾಟಗಾರರಷ್ಟೇ ಅಲ್ಲಾ ಅವರು ಪರಿಸರ ವಾದಿ. ಪರಿಸರದ ಮೇಲಿದ್ದ ಕಾಳಜಿ ಮೇಲೆ ಇನ್ನಷ್ಟು ಬೆಳಕು ಚೆಲ್ಲುವ ಕೆಲಸ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಸಸಿ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಉಪ ಪೊಲೀಸ್ ಆಯುಕ್ತರಾದ ಕೆ.ಎಸ್.ಸುಂದರ್ ರಾಜ್ ಚಾಲನೆ ನೀಡಿದರು. ವಿಚಾರಗೋಷ್ಠಿಯಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರ ವೆಂಕಟೇಶ್, ಸಂಜೀವಯ್ಯ ಮೆಮೋರಿಯಲ್ ಟ್ರಸ್ಟ್‌ನ ಬಿ.ಜಿ. ದಯಾನಂದ್ ಮೂರ್ತಿ, ಡಾ. ಶ್ರೀನಿವಾಸ. ಡಿ. ಮಣಗಳ್ಳಿ, ಪತ್ರಕರ್ತ ಮೋಹನ್ ಮೈಸೂರು, ಅಧ್ಯಾಪಕರಾದ ಡಾ. ಟಿ. ನಿರಂಜನ್ ಕುಮಾರ್, ಐ. ಡಿ. ಲೋಕೇಶ್. ನಿವೃತ್ತ ಗ್ರಂಥಪಾಲಕರಾದ ರಾಮಯ್ಯ, ಕೆ. ಮಹೇಶ್ ಸಂಶೋಧಕರಾದ ಮನು, ಮಹೇಶ್, ಜಯಚಂದ್ರ ಇನ್ನಿತರರು ಇದ್ದರು.

Tags:
error: Content is protected !!