ಮೈಸೂರು: ವಕ್ಫ್ ಆಸ್ತಿ ವಿವಾದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಮೈಸೂರಿನಲ್ಲಿಂದು ಬಿಜೆಪಿ ನಾಯಕರು ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಮೈಸೂರು ನಗರ ಮತ್ತು ಗ್ರಾಮಾಂತರ ಬಿಜೆಪಿ ವತಿಯಿಂದ ಇಂದು(ನ.22) ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ರೈತರ ಜಮೀನು ರೈತರಿಗೆ ಉಳಿಯಬೇಕು. ಸರ್ಕಾರ ಯಾರ ಆಸ್ತಿಯನ್ನು ಕಬಳಿಕೆ ಮಾಡಿದ್ದರೂ ಅದು ತಪ್ಪೇ ಆಗುತ್ತದೆ. ರೈತರು ಉಳುಮೆ ಮಾಡುವ ಭೂಮಿಯನ್ನು ಕಸಿಯುವಂತಹ ವಕ್ಫ್ ಮಂಡಳಿಗೆ ಸರ್ಕಾರ ಕಡಿವಾಣವನ್ನು ಹಾಕಬೇಕು. ಈ ದೇಶದಲ್ಲಿ ಸಂವಿಧಾನ ಎಲ್ಲರಿಗೂ ಒಂದೇ ಆಗಿದೆ. ಈ ನಿಟ್ಟಿನಲ್ಲಿ ಸರ್ಕಾರ ವಕ್ಫ್ ಆಸ್ತಿಗಳಲ್ಲಿ ತಿದ್ದುಪಡಿ ಮಾಡಿ ರೈತರ ಭೂಮಿಗಳನ್ನು ರೈತರಿಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಎಲ್.ನಾಗೇಂದ್ರ ಮಾತನಾಡಿ, ರಾಜ್ಯ ಸರ್ಕಾರ ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು, ದೇವಾಲಯಗಳು ಹಾಗೂ ರೈತರ ಜಮೀನುಗಳನ್ನು ವಕ್ಫ್ ಆಸ್ತಿಯಾಗಿ ಬದಲಾವಣೆ ಮಾಡಿ ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಆದರೆ ನಾವೆಲ್ಲರೂ ಯಾವುದೇ ಕಾರಣಕ್ಕೂ ಒಂದಿಂಚೂ ಜಾಗವನ್ನು ಕೂಡ ವಕ್ಫ್ ಮಂಡಳಿಗೆ ಬಿಟ್ಟು ಕೊಡುವುದಿಲ್ಲ. ಈ ಬಗ್ಗೆ ಸರ್ಕಾರ ವಕ್ಫ್ ಮಂಡಳಿಯ ವಿರುದ್ಧ ಕ್ರಮ ಕೈಗೊಂಡು ರೈತರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.