ಮೈಸೂರು: ಕನ್ನಡದ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದ ನಟ ಕಮಲ್ ಹಾಸನ್‌ನನ್ನು ಕರ್ನಾಟಕದಿಂದ ಬಹಿಷ್ಕರಿಸಬೇಕು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಅವರು, ನಟ ಕಮಲ್ ಹಾಸನ್ ವಿಚಾರದಲ್ಲಿ ಕನ್ನಡ ಚಿತ್ರರಂಗ ಗಂಭೀರ ಚಿಂತನೆ ಮಾಡಬೇಕಿದೆ. ಕಮಲ್ ಹಾಸನ್ ಚಿತ್ರ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಬಿಡುಗಡೆಯಾಗಬಾರದು. ರಾಜ್ಯದ ಜನರು ಕ್ಷಮೆ ಕೇಳಬೇಕೆಂದು ಅಗ್ರಹಿಸುತ್ತಿದ್ದಾರೆ. ಕಮಲ್ ಹಾಸನ್ ವಿರುದ್ಧ ಸಿಎಂ ಸಿದ್ದರಾಮಯ್ಯ ಮೊಕದ್ದಮೆ ಹಾಕಬೇಕು. ಕರ್ನಾಟಕ ಹೈಕೋರ್ಟ್‌ಗೆ ಕರೆದುಕೊಂಡು ಬಂದು ರಾಜ್ಯದ ಜೈಲಿನಲ್ಲಿ ಹಾಕಬೇಕು. ಈ ವಿಚಾರದಲ್ಲಿ ರಾಜಕಾರಣಿಗಳು, ನಟರು ಬೀದಿಗೆ ಬರಬೇಕು. ಒಂದು ವೇಳೆ ಕಮಲ್ ಸಿನಿಮಾ ಬಿಡುಗಡೆಯಾದರೆ ರಾಜ್ಯದಲ್ಲಿ ತೀವ್ರ ಹೋರಾಟ ಮಾಡಬೇಕಾಗುತ್ತದೆ. ಎಲ್ಲಾ ಕನ್ನಡಪರ ಸಂಘಟನೆಗಳು ಸೇರಿ ಕರ್ನಾಟಕ ಬಂದ್ ಮಾಡುತ್ತೇವೆ. ತಮಿಳುನಾಡಿನ ಎಲ್ಲಾ ರಾಜಕೀಯ ಪಕ್ಷಗಳು ಇದನ್ನು ಖಂಡಿಸಬೇಕು. ಸಾಹಿತಿಗಳು, ಬರಹಗಾರರು ಈಗ ಕನ್ನಡದ ಪರ ನಿಲ್ಲಬೇಕು. ಕೇವಲ ಶಿವರಾಜ್ ಕುಮಾರ್ ಮಾತ್ರವಲ್ಲ, ಎಲ್ಲಾ ನಟರು ಕನ್ನಡದ ಪರ ನಿಲ್ಲಬೇಕು ಎಂದು ಆಗ್ರಹಿಸಿದರು.





