Mysore
26
few clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ನಾಗಮಂಗಲ ಪ್ರಕರಣ: ವೋಟ್‌ ಬ್ಯಾಂಕ್‌ ರಾಜಕಾರಣ ಮಾಡದೇ ಮೊದಲು ನೊಂದವರಿಗೆ ಧೈರ್ಯ ತುಂಬಲಿ; ವಿ ಸೋಮಣ್ಣ

ಮೈಸೂರು: ವೋಟ್ ಬ್ಯಾಂಕ್ ರಾಜಕಾರಣ ಮಾಡದೇ ಮೊದಲು ಸ್ಥಳ ಪರಿಶೀಲಿಸಿ ನೊಂದವರಿಗೆ ಧೈರ್ಯ ತುಂಬಲಿ. ಗೃಹಸಚಿವರು ಬೃಹಸ್ಪತಿಗಳು, ಬುದ್ಧಿವಂತರು ಎನ್ನುವುದು ಗೊತ್ತಿದೆ. ಕ್ರಿಯಾಶೀಲರು ಎನ್ನುವುದು ಗೊತ್ತಿರುವ ಕಾರಣ ಮೊದಲು ತಪ್ಪಿತಸ್ಥರ ವಿರುದ್ಧ ಕ್ರಮಜರುಗಿಸಲಿ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ಮೈಸೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾಗಮಂಗಲದಲ್ಲಿ ನಡೆದಿರುವುದು ಸಣ್ಣ ಗಲಾಟೆಯಲ್ಲ. ಸ್ವಾತಂತ್ರ್ಯ ತಂದು ಕೊಡುವ ಸಂದರ್ಭದಲ್ಲಿ ಬಾಲಗಂಗಾಧರ್ ತಿಲಕ್ ಅವರು ದೇಶದ ಜನರನ್ನು ಒಂದುಗೂಡಿಸಲು ಗಣಪತಿ ಪ್ರತಿಷ್ಠಾಪನೆ ಮಾಡುವ ಸಂಪ್ರದಾಯವನ್ನು ಹುಟ್ಟು ಹಾಕಿದರು. ಅಂತಹ ಪರಂಪರೆ,ಸಂಪ್ರದಾಯ ಇಂದಿಗೂ ಮುಂದುವರಿದಿದೆ. ಗಣೇಶನ ವಿಸರ್ಜನೆ ಮೆರವಣಿಗೆ ವೇಳೆ ಕಲ್ಲು ತೂರಾಟ ಮಾಡಿರುವುದು ಖಂಡನೀಯ ಎಂದರು.

ಗಣೇಶ ಉತ್ಸವ ಒಂದು ಹಬ್ಬದ ಸಂಭ್ರಮವಿದ್ದಂತೆ.ಅದನ್ನು ಸಹಿಸದೆ ಕಿಡಿಗೇಡಿಗಳು ಗಲಾಟೆ ಮಾಡಿದ್ದರಿಂದ ನ್ಯಾಯಯುತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಜರುಗಿಸಬೇಕು ಎಂದು ರಾಜ್ಯಸರ್ಕಾರಕ್ಕೆ ಸಲಹೆ ನೀಡಿದರು. ಗೃಹಸಚಿವರು ಬರೀ ಮಾತನಾಡಿಕೊಂಡು ಕಾಲಕಳೆಯಬಾರದು. ಅವರೊಬ್ಬ ಬೃಹಸ್ಪತಿ ಎನ್ನುವುದು ಗೊತ್ತಿದೆ. ಸ್ಥಳಕ್ಕೆ ತೆರಳಿ ಪರಿಶೀಲಿಸಬೇಕು. ದೊಡ್ಡತನದಿಂದ ವರ್ತಿಸಬೇಕು. ವೋಟ್ ಬ್ಯಾಂಕ್ ರಾಜಕಾರಣ ಮಾಡಬಾರದು. ಇದು ರಾಜ್ಯಸರ್ಕಾರಕ್ಕೆ ಒಳ್ಳೆಯದಲ್ಲ ಎಂದರು.

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಪ್ರಧಾನಿ ನರೇಂದ್ರಮೋದಿ ಭೇಟಿ ಮಾಡಿರುವುದರಲ್ಲಿ ಯಾವುದೇ ತಪ್ಪಿಲ್ಲ. ೧೪೨ ಕೋಟಿ ಜನರ ಪ್ರಧಾನಿಯಾಗಿದ್ದಾರೆ. ಗೌರಿಗಣೇಶ ಹಬ್ಬದ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿಗಳು ಆಹ್ವಾನಿಸಿದ್ದಾಗ ಹೋಗಿದ್ದಾರೆ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬಾರದು ಎಂದರು. ಪ್ರಧಾನಿಗಳು ಮುಖ್ಯ ನ್ಯಾಯಮೂರ್ತಿಗಳನ್ನು ಭೇಟಿ ಮಾಡಬಾರದೆಂದು ಹೇಳಿಲ್ಲ. ಸಂವಿಧಾನದಲ್ಲಿ ಅವಕಾಶವಿದೆ ಎಂಬುದನ್ನು ಹೇಳಲಾಗಿದೆ. ಡಾ.ಮನಮೋಹನ್ ಸಿಂಗ್ ಅವಧಿಯಲ್ಲಿ ಯಾವ ರೀತಿ ನಡೆದುಕೊಳ್ಳಲಾಗಿತ್ತು, ಯಾವ ರೀತಿ ಇತ್ತು ಎನ್ನುವುದು ದೇಶದ ಜನರಿಗೆ ಗೊತ್ತಿದೆ. ಸಣ್ಣಪುಟ್ಟ ವಿಚಾರಗಳನ್ನು ಮುಂದಿಟ್ಟುಕೊಂಡು ಹಾದಿಬೀದಿಯಲ್ಲಿ ಮಾತನಾಡಬಾರದು ಎಂದು ತಿರುಗೇಟು ನೀಡಿದರು. ಮುಂದಿನ 2047ಕ್ಕೆ ಭಾರತ ಜಗತ್ತಿನಲ್ಲೇ ಮೊದಲ ಸ್ಥಾನದಲ್ಲಿ ಇರಲಿದೆ. 2027ಕ್ಕೆ ಭಾರತ ಯಾವ ರೀತಿ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುತ್ತದೆ ಎಂಬುದನ್ನು ಸ್ವಲ್ಪ ಕಾದು ನೋಡಬೇಕು. ದೇಶದ ಸರ್ವಾಂಗೀಣ ಅಭಿವೃದ್ಧಿ ಮುಖ್ಯ ಹೊರತು ಬೇರೇನೂ ಇಲ್ಲ ಎಂದರು.

ಅದ್ಧೂರಿ ಸ್ವಾಗತ: ಕೇಂದ್ರ ಸಚಿವರಾದ ಬಳಿಕ ಮೈಸೂರು ನಗರಕ್ಕೆ ಆಗಮಿಸಿದ ಸಚಿವ ವಿ.ಸೋಮಣ್ಣ ಅವರನ್ನು ಮೈಸೂರು-ಬೆಂಗಳೂರು ಟೋಲ್‌ಗೇಟ್ ಬಳಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ನಂತರ,ಚಾಮುಂಡಿಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿದೇವಿಯ ದರ್ಶನ ಪಡೆದರು. ನಂತರ ಸರ್ಕಾರಿ ಅತಿಥಿಗೃಹಕ್ಕೆ ಆಗಮಿಸಿದ ಅವರನ್ನು ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಟಿ.ಎಸ್.ಶ್ರೀವತ್ಸ,ನಗರಾಧ್ಯಕ್ಷ ಎಲ್.ನಾಗೇಂದ್ರ, ಮಾಜಿ ವಿಧಾನ ಪರಿಷತ್ ಸದಸ್ಯ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಕಾಂಪೋಸ್ಟ್ ನಿಗಮದ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ ಮೊದಲಾದವರು ಹಾರ ಹಾಕಿ ಸ್ವಾಗತಿಸಿದರು. ಮುಖಂಡರಾದ ಮಿರ್ಲೆ ಶ್ರೀನಿವಾಸಗೌಡ, ಕೆ.ಆರ್.ರಮೇಶ್‌ಕುಮಾರ್, ಕೆ.ವಸಂತಕುಮಾರ್, ವಾಣೀಶ್ ಕುಮಾರ್, ಎಚ್.ಜಿ.ಗಿರಿಧರ್, ಮಹೇಶ್ ಕೇಬಲ್, ಮಾಜಿ ಮಹಾಪೌರ ಎಸ್.ಸತೀಶ್‌ಸ್ವಾಮಿ, ಅಮ್ಮನಪುರ ಮಲ್ಲೇಶ್, ಎಸ್.ಎಂ.ಶಿವಪ್ರಕಾಶ್,ಚಿನ್ನಸ್ವಾಮಿ ವಡ್ಡಗೆರೆ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಹಿನಕಲ್ ಬಸವರಾಜು, ಗೆಜ್ಜಗಳ್ಳಿ ಮಹೇಶ್ ಮತ್ತಿತರರು ಹಾಜರಿದ್ದರು.

Tags: