ಮೈಸೂರು: ಶ್ರೀರಾಮ ಮಂದಿರ ನಿರ್ಮಿಸಿದ ಮೇಲೆ ನಮಗೆ ಸ್ವಾತಂತ್ರ್ಯ ಬಂದಿದೆ ಎಂದು ಹೇಳಿಕೆ ನೀಡಿದ್ದ ಮೋಹನ್ ಭಾಗವತ್ ಮೇಲೆ ಕ್ರಮ ಜರುಗಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್. ಉಗ್ರಪ್ಪ ಸವಾಲು ಹಾಕಿದ್ದಾರೆ.
ನಗರದಲ್ಲಿ ಇಂದು(ಜನವರಿ.17) ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ ಹಾಗೂ ಜಿ.ಎನ್.ನಂಜುಡಸ್ವಾಮಿ ಅವರ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಹುಲ್ ಗಾಂಧಿ ಹೇಳಿಕೆ ನೀಡಿದಾಗ ಅವರ ವಿರುದ್ಧ ಅಪಾರ್ಥ ಕಲ್ಪಿಸಿ ದೂರು ನೀಡಿ ಪ್ರಕರಣ ದಾಖಲಿಸುವ ಕಾರ್ಯವನ್ನು ಬಿಜೆಪಿ ಮಾಡುತ್ತದೆ. ಆದರೆ ಕೇಂದ್ರ ಸರ್ಕಾರ ಮೋಹನ್ ಭಾಗವತ್, ಅಮಿತ್ ಶಾ ಅವರು ಭಾರತದ ಸಂವಿಧಾನ, ಸ್ವಾತಂತ್ರ್ಯ ಹಾಗೂ ಅಂಬೇಡ್ಕರ್ ಅವರ ಬಗ್ಗೆ ಮಾತನಾಡಿದರು ಯಾವುದೇ ಕಾನೂನು ಕ್ರಮ ತೆಗೆದುಕೊಂಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರಕ್ಕೆ ಸಂವಿಧಾನದ ಮೇಲೆ ಗೌರವವಿದ್ದರೆ ಮೋಹನ್ ಭಾಗವತ್ ಮೇಲೆ ಕ್ರಮ ಕೈಗೊಳ್ಳಲಿ. ಸ್ವಾತಂತ್ರ್ಯ ಚಳುವಳಿಯಲ್ಲಿ ಆರ್‌ಎಸ್ಎಸ್ ಪಾತ್ರ ಏನು? ತ್ಯಾಗ ಬಲಿದಾನದ ಮೂಲಕ ಬಂದಿರುವ ಸ್ವಾತಂತ್ರ್ಯವನ್ನು ಅಣಕು ಮಾಡಿತ್ತೀರಲ್ಲ ನಿಮಗೆ ಬುದ್ದಿ ಭ್ರಮಣೆ ಆಗಿದೆಯಾ? ಎಂದು ಪ್ರಶ್ನಿಸಿದರು. ಇನ್ನೂ ಆರ್‌ಎಸ್‌ಎಸ್ ಹಾಗೂ ಬಿಜೆಪಿಯವರು, ಈ ದೇಶದ ಇತಿಹಾಸ ಮತ್ತು ಸ್ವಾತಂತ್ರ್ಯವನ್ನು ತಿರುಚುವ ಕಾರ್ಯ ಮಾಡುತ್ತಿದೆ. ಇದನ್ನು ಸಾರ್ವಜನಿಕರಿಗೆ ತಿಳಿಸುವ ಕಾರ್ಯವನ್ನು ನಾವು ಮಾಡುತ್ತೇವೆ ಎಂದು ಹೇಳಿದರು.