ಮೈಸೂರು : ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ನಡೆದಿದ್ದ ವ್ಯಕ್ತಿಯೊಬ್ಬರ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಮದ್ಯ ಸೇವಿಸಿ ಬಂದು ಕಿರುಕುಳ ನೀಡುತ್ತಿದ್ದ ಮಗನ ಕಾಟವನ್ನು ಸಹಿಸಲಾರದೆ ತಾಯಿಯೇ ಆತನನ್ನು ಹತ್ಯೆಗೈದಿರುವ ವಿಷಯ ಬೆಳಕಿಗೆ ಬಂದಿದೆ. ಇದೀಗ ಮೃತ ವ್ಯಕ್ತಿಯ ತಾಯಿಯನ್ನು ವಜರ್‌ಬಾದ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದ ರಾಜೇಂದ್ರನಗರ ನಿವಾಸಿ ಕರಿಯಪ್ಪ ಎಂಬವರ ಪತ್ನಿ ಮಂಜುಳ ಎಂಬವರೇ ತನ್ನ ಮಗ ರಮೇಶ್ ಎಂಬಾತನನ್ನು ಹತ್ಯೆಗೈದಿದ್ದಾರೆ. ಏ.14ರಂದು ಚಾಮುಂಡಿಬೆಟ್ಟದ ಬಳಿಯತಾವರೆಕಟ್ಟೆ ಅಷ್ಟೇ ಏಕೆ ಆತನ ಶರ್ಟ್‌ನಲ್ಲಿ ಬಟ್ಟೆ ರಸ್ತೆಯ ಪಕ್ಕದಲ್ಲಿನ ಖಾಲಿ ಜಾಗದಲ್ಲಿ ವ್ಯಕ್ತಿಯೊಬ್ಬನ ಕೊಲೆಯಾಗಿದ್ದ ಸಂಬಂಧ ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಸಂಬಂಧ ಸೂಕ್ತ ತನಿಖೆಗಾಗಿ ಪೊಲೀಸ್ ಆಯುಕ್ತರು, ದೇವರಾಜ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಕೆ.ರಾಜೇಂದ್ರ ಅವರ ಉಸ್ತುವಾರಿಯಲ್ಲಿ ಹಾಗೂ ನಿರೀಕ್ಷಕರಾದ ಎಂ. ಮಹದೇವಸ್ವಾಮಿ ನೇತೃತ್ವದಲ್ಲಿ 4 ವಿಶೇಷ ತಂಡಗಳನ್ನು ರಚಿಸಿದ್ದರು.
ಕೃತ್ಯ ನಡೆದ ಸ್ಥಳದ ಸುತ್ತಮುತ್ತ ಹಾಗೂ ಮೈಸೂರು ನಗರದ ವಿವಿಧ ಸ್ಥಳಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ವೀಕ್ಷಿಸಿ ಕೃತ್ಯ ನಡೆದ ಬಳಿ ದೊರೆತ ಮೃತ ಹಾಗೂ ಆರೋಪಿಯ ಚಲನ ವಲನದ ಮಾಹಿತಿ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿದ ತಂಡವು ಅಂತಿಮವಾಗಿ ಪ್ರಕರಣವನ್ನು ಭೇದಿಸಿದೆ.
ಆರೋಪಿಯನ್ನು ವಶಕ್ಕೆ ಪಡೆದು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದಾರೆ. ಈ ವೇಳೆ ನನ್ನ ಎರಡನೇ ಮಗ ರಮೇಶ್ ವಿವಾಹವಾಗದೇ ನನ್ನ ಜೊತೆಯಲ್ಲಿಯೇ ವಾಸವಾಗಿದ್ದು, ವಿಪರೀತ ಕುಡುಕನಾಗಿದ್ದ. ಮದ್ಯ ಸೇವಿಸಲು ಹಣ ನೀಡುವಂತೆ ವಿಪರೀತ ಪೀಡಿಸುತ್ತಿದ್ದನು. ಈತನು ಪ್ರತಿನಿತ್ಯ ಕುಡಿದು ಮನೆಗೆ ಬಂದು ನನ್ನ ಮೇಲೆ ಗಲಾಟೆಮಾಡಿ ದೈಹಿಕ, ಮಾನಸಿಕ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ನಾನು ಇವನನ್ನು ಕೊಲ್ಲಬೇಕೆಂದು ನಿರ್ಧರಿಸಿದೆ.
ಏ.14ರಂದು ರಮೇಶ್‌ನನ್ನು ಬೆಟ್ಟಕ್ಕೆ ಹೋಗಿ ಬರೋಣವೆಂದು ಮನೆಯಿಂದ ಆಟೋದಲ್ಲಿ ಕರೆದುಕೊಂಡು ಹೋಗಿ, ಬೆಳಿಗ್ಗೆ ಸುಮಾರು 8.30ರ ಸಮಯದಲ್ಲಿ ಚಾಮುಂಡಿ ಬೆಟ್ಟಕ್ಕೆ ಹೋಗುವ ರಸ್ತೆಯ ತಾವರಕಟ್ಟೆಯ ಬಳಿ ಆಟೋದಿಂದ ಇಳಿದು ರಮೇಶ್ ನನ್ನು ಖಾಲಿ ಜಾಗಕ್ಕೆ ಕರೆದುಕೊಂಡು ಹೋದೆ.
ಅಲ್ಲಿ ದೊಣ್ಣೆ ಹಾಗೂ ಕಲ್ಲಿನಿಂದ ಆತನ ತಲೆಗೆ ಹೊಡೆದು ಸಾಯಿಸಿದೆ ಎಂದು ವಿಚಾರಣೆ ವೇಳೆ ಆಕೆ ತಿಳಿಸಿದ್ದಾರೆ. ನಂತರ ಆರೋಪಿ ಮಂಜುಳ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಉಪ ನಿರೀಕ್ಷಕರಾದ ಪಿ.ನಟರಾಜು, ಎನ್.ಅನಿಲ್ ಕುಮಾರ್, ರಂಗಸ್ವಾಮಿ, ಎಂ.ಎಲ್.ಸಿದ್ದೇಶ್, ಸಿಬ್ಬಂದಿಗಳಾದ ಬಿ.ವಿ.ಪ್ರಕಾಶ್, ಪುರುಷೋತ್ತಮ, ಎಸ್. ಸತೀಶ್ ಕುಮಾರ್, ಗೋಪಾಲ್, ಪ್ರವೀಣ್ ಕುಮಾರ್, ಸಂಜು, ಸಂದೇಶ್ ಕುಮಾರ್, ವೆಂಕಟೇಶ್, ಮೊಹಮ್ಮದ್ ಇಸ್ಕಾಹಿಲ್, ಕೃಷ್ಣ, ಪರುಶುರಾಮ್, ನಂದಿನಿ ಹಾಗೂ ಸಿಡಿಆರ್ ಘಟಕದ ಕುಮಾರ್ ಅವರು ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಪೊಲೀಸರಿಗೆ ಸವಾಲಾಗಿದ್ದ ಕೇಸ್ : ಹಠಕ್ಕೆ ಬಿದ್ದು ಭೇದಿಸಿದ ಸೀಮಾ ಲಾಟ್ಕರ್
ಈ ಕೊಲೆ ಪ್ರಕರಣ ಅಕ್ಷರಶಃ ಪೊಲೀಸರ ನಿದ್ದೆಗೆಡಿಸಿತ್ತು. ಕೊಲೆಯಾದ ವ್ಯಕ್ತಿಯ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಗುರುತು ಸಿಗದಂತೆ ಮಾಡಲಾಗಿತ್ತು. ಮೃತ ವ್ಯಕ್ತಿಯ ಬಳಿ ಯಾವುದೇ ಗುರುತಿನ ಚೀಟಿ ಇರಲಿಲ್ಲ. ಸ್ಥಳದ ಅಂಗಡಿಯ ವಿಳಾಸದ ಕುರುಹು ಕೂಡ ಇರಲಿಲ್ಲ. ಹೀಗಾಗಿ ಈ ಪ್ರಕರಣ ಪೊಲೀಸರಿಗೆ ಸವಾಲಾಗಿತ್ತು. ಇದರ ಜೊತೆಗೆ ತಾವರೆಕಟ್ಟೆ ಬಳಿ ತೆರಳುವ ಮಾರ್ಗದ ಸಿಸಿಟಿವಿಗಳು ಕೂಡ ಕೆಟ್ಟು ಹೋಗಿದ್ದವು. ಇದರಿಂದಾಗಿ ಪೊಲೀಸರಿಗೆ ತನಿಖೆ ಕಬ್ಬಿಣದ ಕಡಲೆಯಂತಾಗಿತ್ತು. ಆದರೆ, ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಮಾತ್ರ ಪ್ರಕರಣವನ್ನು ಭೇದಿಸಲೇಬೇಕು ಎಂದು ಪೊಲೀಸರ ತಂಡಕ್ಕೆ ಸೂಚನೆ ನೀಡಿದ್ದರು. ಹೀಗಾಗಿ ತನಿಖಾ ತಂಡ ಬೆಟ್ಟದ ಮಾರ್ಗದಲ್ಲಿನ ಸಿಸಿಟಿವಿಗಳ ಫೂಟೇಜ್ ಪರಿಶೀಲನೆಗೆ ಮುಂದಾಯಿತು. ಮೈಸೂರು ನಗರದ ವಿವಿಧ ಸ್ಥಳಗಳಲ್ಲಿ ಅಳವಡಿಸಿದ್ದ ಸುಮಾರು 200 ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಮೃತಪಟ್ಟಿರುವ ವ್ಯಕ್ತಿ ಮತ್ತು ಆರೋಪಿಯ ಚಲನವಲನಗಳನ್ನು ಪತ್ತೆಹಚ್ಚಿ, ಅಂತಿಮವಾಗಿ ಮಂಜುಳಾ ಅವರನ್ನು ಬಂಧಿಸಲಾಯಿತು. ಪೊಲೀಸರ ಈ ಕಾರ್ಯಚರಣೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.





