Mysore
21
scattered clouds
Light
Dark

ಮೈಸೂರು ದಸರಾ ಗಜಪಡೆಯ ತೂಕ ಪರೀಕ್ಷೆ: ಕ್ಯಾಪ್ಟನ್‌ ಪಟ್ಟ ಉಳಿಸಿಕೊಂಡ ಅಭಿಮನ್ಯು

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಶುರುವಾಗಿದ್ದು, ಇಂದು ಗಜಪಡೆಗೆ ತೂಕ ಪರೀಕ್ಷೆ ನಡೆಸಲಾಗಿದೆ.

ಕಾಡಿನಿಂದ ನಾಡಿಗೆ ಬಂದಿರುವ ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ ದಸರಾ ಗಜಪಡೆಗೆ ಇಂದು ತೂಕ ಪರೀಕ್ಷೆ ನಡೆಸಲಾಗಿದೆ.

ಕಾಡಿನಿಂದ ನಾಡಿಗೆ ಬಂದ ದಸರಾ ಗಜಪಡೆಯನ್ನು ತೂಕ ಪರೀಕ್ಷೆ ಮಾಡುವುದು ಆಗಿನಿಂದಲೂ ನಡೆದುಕೊಂಡು ಬಂದಿರುವ ಪ್ರತೀತಿ. ತೂಕದ ಆಧಾರದ ಮೇಲೆಯೇ ಗಜಪಡೆಗೆ ಪೌಷ್ಟಿಕ ಆಹಾರ ನೀಡಲಾಗುತ್ತದೆ. ಹೀಗಾಗಿ ಇಂದು ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ಸಾಯಿರಾಂ ಅಂಡ್‌ ಕೋ, ಎಲೆಕ್ಟ್ರಿಕ್‌ ತೂಕ ಮಾಪನ ಕೇಂದ್ರದಲ್ಲಿ 9 ಆನೆಗಳನ್ನು ತೂಕ ಮಾಡಲಾಯಿತು.

ಈ 9 ಆನೆಗಳ ಪೈಕಿ ಕ್ಯಾಪ್ಟನ್‌ ಅಭಿಮನ್ಯುನೇ ಅತೀ ಹೆಚ್ಚು ತೂಕ ಇದ್ದಾನೆ. ಅಭಿಮನ್ಯು 5560 ಕೆಜಿ ತೂಕ ಹೊಂದಿದ್ದಾನೆ. ಉಳಿದ ಆನೆಗಳಿಗಿಂತ ಅಧಿಕ ತೂಕ ಹೊಂದಿದ್ದಾನೆ.

ಉಳಿದಂತೆ ವರಲಕ್ಷ್ಮೀ 3495, ಭೀಮ 4945, ಏಕಲವ್ಯ 4730, ಲಕ್ಷ್ಮೀ 2480, ರೋಹಿತ್‌ 3625, ಗೋಪಿ 4970, ಕಂಜನ್‌ 4515, ಧನಂಜಯ 5155 ಕೆಜಿ ತೂಕ ಇದ್ದಾನೆ.

ದಸರಾ ಗಜಪಡೆಯ ತೂಕ ಪರೀಕ್ಷೆ ಕುರಿತು ಮೈಸೂರು ವಲಯ ವನ್ಯಜೀವಿ ವಿಭಾಗದ ಡಿಸಿಎಫ್‌ ಡಾ.ಪ್ರಭುಗೌಡ ಪ್ರತಿಕ್ರಿಯೆ ನೀಡಿದ್ದು, ಆನೆಗಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಲಾಗಿದೆ. ಆನೆಗಳ ತೂಕದ ಆಧಾರದ ಮೇಲೆ ಪೌಷ್ಟಿಕ ಆಹಾರ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಜಂಬೂಸವಾರಿ ಮೆರವಣಿಗೆಗೂ ಮುನ್ನ ಮತ್ತೊಮ್ಮೆ ತೂಕ ಪರೀಕ್ಷೆ ಮಾಡುತ್ತೇವೆ. ನಾಳೆಯಿಂದಲೇ ಗಜಪಡೆಯ ನಿತ್ಯ ತಾಲೀಮು ಆರಂಭವಾಗುತ್ತದೆ ಎಂದರು.