ಮೈಸೂರು: ಇಂದು ಮುಂಜಾನೆ ಚಳಿ, ಮಳೆಯನ್ನು ಲೆಕ್ಕಿಸದೇ ಮೈಸೂರಿನ ಸ್ವಚ್ಚತೆಗಾಗಿ ಫಿಟ್ ಮೈಸೂರು ಸಾಮೂಹಿಕ ಆರೋಗ್ಯ ಮತ್ತು ಜಾಗೃತಿ ನಡಿಗೆ ಯಲ್ಲಿ ಮೈಸೂರಿನ ಸಾವಿರಾರು ಮಂದಿ ಹೆಜ್ಜೆ ಹಾಕಿ ಸ್ವಚ್ಚತೆಯ ಮಹತ್ವ ಸಾರಿದರು.
ಮೈಸೂರು ವಿಶ್ವವಿದ್ಯಾನಿಲಯ, ನಗರಪಾಲಿಕೆ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘ, ಮೈಸೂರು ಜಿಮ್ ಅಸೋಸಿಯೇಷನ್, ಜಿಎಸ್‌ಎಸ್, ಸಿಎಸ್‌ಆರ್ ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ೫ ಕಿಲೋ ಮೀಟರ್ ದೂರದ ಫಿಟ್ ಮೈಸೂರು ಸಾಮೂಹಿಕ ಆರೋಗ್ಯ ಮತ್ತು ಜಾಗೃತಿ ನಡಿಗೆಗಾಗಿ ಮೈಸೂರಿನ ಹಿರಿಯರು ಮತ್ತು ಕಿರಿಯರು ಸೇರಿದಂತೆ ಎಲ್ಲಾ ವಯೋಮಾನದವರು ಹೆಜ್ಜೆ ಹಾಕಿದರು.
ಮುಂಜಾನೆ ೫ ಗಂಟೆಯಿಂದಲೇ ಮೈಸೂರಿನ ಮಾನಸಗಂಗೋತ್ರಿಯ ಬಯಲು ರಂಗಮಂದಿರಕ್ಕೆ ಆಗಮಿಸಿದ್ದ ಜನರು ನೋಂದಣಿ ಮಾಡಿಸಿ, ಬಿಳಿ ಟೀ ಶರ್ಟ್ ಮತ್ತು ಟೋಪಿ ಧರಿಸಿಕೊಂಡು ಶಿಸ್ತಿನ ಸಿಪಾಯಿಗಳಂತೆ ಸ್ವಚ್ಚತೆ ನಡಿಗೆಗೆ ಸನ್ನದ್ಧರಾದರು.
೬.೩೦ಕ್ಕೆ ಮಾನಸಗಂಗೋತ್ರಿಯ ಬಯಲು ರಂಗಮಂದಿರದ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹಾಗೂ ಪರ್ವತಾರೋಹಿ ಡಾ.ಉಷಾ ಹೆಗಡೆ ಹಸಿರು ನಿಶಾನೆ ತೋರಿಸುವ ಮೂಲಕ ಜಾಗೃತಿ ನಡಿಗೆಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಚಾಮರಾಜನಗರ ಸಂಸದ ಸುನೀಲ್ ಬೋಸ್, ಶಾಸಕ ಟಿ.ಎಸ್.ಶ್ರೀವತ್ಸ, ವಿಧಾನ ಪರಿಷತ್ ಸದಸ್ಯರಾದ ಕೆ.ಶಿವಕುಮಾರ್, ಸಿ.ಎನ್.ಮಂಜೇಗೌಡ, ಮೈಸೂರು ವಿವಿ ಕುಲಪತಿ ಎನ್.ಕೆ.ಲೋಕನಾಥ್, ಪ್ರಾದೇಶಿಕ ಆಯುಕ್ತ ನಿತೀಶ್ ಪಾಟೀಲ್, ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಸೇರಿದಂತೆ ಮತ್ತಿತರರು ಭಾಗವಹಿಸಿದರು.





