ಮೈಸೂರು : ಬಂಡಾಯ ಬರಗೂರು ರಾಮಚಂದ್ರಪ್ಪರ ಮಾತು, ಬರಹದಲ್ಲಿದ್ದರು, ಅವರ ಭಾವಕೋಶವು ಮೃದುತ್ವದ್ದಾಗಿ ಎಲ್ಲ ಕ್ಷೇತ್ರಗಳಲ್ಲೂ ವಿಸ್ತರಿಸಿದೆ. ಈ ನಿಟ್ಟಿನಲ್ಲಿ ಅವರು ಬಹುತ್ವದ ಬೇರಾಗಿ ಸೌಹಾರ್ದವನ್ನು ಬದುಕಾಗಿಸಿಕೊಂಡಿದ್ದಾರೆ ಎಂದು ಎಂದು ಚಲನಚಿತ್ರ ನಟಿ ಭಾವನಾ ರಾಮಣ್ಣ ಹೇಳಿದರು.
ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮತ್ತು ದಂಡಿನ ರಾಜಪ್ಪ ಪರಿವಾರ ಪ್ರತಿಷ್ಠಾನವು ಆಯೋಜಿಸಿದ್ದ ‘ಬರಗೂರು: ಬಹುತ್ವದ ಬೇರು’ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಬರಗೂರರ ಅಲೋಚನೆ ಒಂದು ಬಗೆಯ ಕ್ಷೇತ್ರದಲ್ಲದೇ, ಎಲ್ಲಾ ಕ್ಷೇತ್ರಕ್ಕಕೂ ವಿಸ್ತರಿಸಿಕೊಂಡಿದ್ದಾರೆ. ಬಂಡಾಯ ಅವರ ಮಾತು, ಬರಹದಲ್ಲಿ ಮಾತ್ರವಿದೆ. ಆದರೆ ಅವರ ಮನಸ್ಸು, ಭಾವಕೋಶ ಮೃದುತ್ವದ ಸೌಹಾರ್ದತೆಯ ಗೂಡು ಎಂದರು.
ಬರಗೂರರ ನನ್ನ ಸಂಬಂಧ, ಕಲೆಯ ಸಂಬಂಧವಾಗಿಲ್ಲದೇ, ಅದನ್ನು ಮೀರಿದ ತಂದೆ ಮಗಳ, ಗುರು ಶಿಷ್ಯರ ಸಂಬಂಧವಾಗಿ ನೆಲೆಗೊಂಡಿದೆ. ಬರಗೂರರು ಪುರುಷ ದೃಷ್ಟಿಯಿಂದ ಹೆಣ್ಣಿನ ತನವನ್ನು ಅರಿತವರು. ಬರಹಗಾರನಿಗೆ ಹೆಂಗರುಳು ಇರಬೇಕೆಂದು ಬರಗೂರರು ಹೇಳಿದ್ದರು. ಹೆಣ್ಣಿಗೆ ಪ್ರತಿ ಪದ, ಜೀವ, ಭಾಷೆ, ದೇಶ ಎಲ್ಲದರೊಂದಿಗೂ ಕರುಳುಬಳ್ಳಿಯ ಸಂಬಂಧವಿದೆ. ಅವರ ಸಿನಿಮಾದ ಕಥೆಗಳು ಸ್ತ್ರೀ ಸಂವೇದನೆಯನ್ನೇ ಹೇಳುತ್ತವೆ. ಭಾಗೀರಥಿ ಸಿನಿಮಾ ಕೆರೆಗೆ ಹಾರ ಪದ್ಯದಿಂದ ಸ್ಛೂರ್ತಿ ಪಡೆದಿದ್ದರೂ ಬರಗೂರರ ವಿಮರ್ಶಾ ವಿಸ್ತರಣೆಯು ಎಲ್ಲರನ್ನೂ ಸೆಳೆಯುತ್ತದೆ’ ಎಂದರು.
ಬರಗೂರು ಅವರು ರಾಜಕುಮಾರ್ ಅವರ ಒಡನಾಡಿಗಳಾಗಿದ್ದರು. ಸಾಹಿತ್ಯ, ಸಿನಿಮಾ, ಹೋರಾಟ ಸೇರಿದಂತೆ ಬರಹಗಾರರಲ್ಲದೇ, ಜ್ಞಾನ ಭಂಡಾರ ಆಗಿದ್ದಾರೆ. ಭೂತಕಾಲ, ವರ್ತಮಾನ ಮತ್ತು ಭವಿಷ್ಯದ ಕೊಂಡಿಯಾಗಿದ್ದಾರೆ ಎಂದು ಹೇಳಿದರು.
ಅವರ ಬರವಣಿಗೆಯ ಚಲನಚಿತ್ರದ ಸಂಭಾಷಣೆಗಳು ಕಾವ್ಯಮಯವಾಗಿವೆ. ಸ್ರೀ ಸಂವೇದನೆಯ ದೂರ ದೃಷ್ಟಿಯೊಂದಿಗೆ, ಕ್ಷಾಮ ಚಲನಚಿತ್ರದಲ್ಲಿ ಪುರುಷಾಹಂಕಾರವನ್ನು ತೋರಿಸಿದ್ದಾರೆ. ಕನ್ನಡ ನೆಲವು ಹೆಣ್ಣಿಗೆ ಮನ್ನಣೆ ನೀಡಿದೆ. ಇಲ್ಲಿನ ವೈವಿದ್ಯತೆ, ಹೊಂದಾಣಿಕೆ ಬೇರೆಲ್ಲೂ ಸಿಗದು. ಈ ಭಾಷೆಯಲ್ಲಿಯೇ ತಾಯ್ತನ, ಹೃದಯವಿದೆ. ಪುರುಷ ಪ್ರಾಧ್ಯನ್ಯತೆಯಲ್ಲದೇ, ಹೆಣ್ಣಿನ ನೋವುಗಳನ್ನು ಅರ್ಥ ಮಾಡಿಕೊಳ್ಳುವ ಪುರುಷರಿದ್ದಾರೆ. ಹೀಗಾಗಿಯೇ ಸಮನ್ವಯದ ಬದುಕು ಇಲ್ಲಿದೆ. ಇದೊಂದು ಸೌಭಾಗ್ಯ, ಈ ಸಮನ್ವಯತೆ ಮತ್ತಷ್ಟು ಹೆಚ್ಚಾಗಬೇಕು’ ಎಂದರು.
ಮೈಸೂರು ವಿಶ್ವವಿದ್ಯಾಲಯ ಬಡವಾಗಿದೆ ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತದೆ. ನಾಡನ್ನು ರೂಪಿಸಿದ ಈ ವಿಶ್ವವಿದ್ಯಾಲಯಗಳು ಬಲಗೊಳ್ಳಬೇಕು. ಜನರ ಧನಿಯಾಗಿ ವಿಧಾನಮಂಡಲಗಳಲ್ಲಿ ಮಾತನಾಡುವವರು ಹೆಚ್ಚಾಗಲಿ. ಈ ದೃಷ್ಟಿಯಿಂದ ಶಿಕ್ಷಣಕ್ಕೆ, ಕನ್ನಡಕ್ಕೆ ಹೆಚ್ಚನ ಮನ್ನಣೆ ದೊರಕಿಸಿಕೊಡುವ ಸೂಕ್ಷ್ಮಮತಿಗಳು ಬೇಕಿದ್ದು, ಅಂತಹ ವೈಶಿಷ್ಟ್ಯತೆ ಬರಗೂರರಲ್ಲಿದೆ ಎಂದರು.
ಮೈಸೂರು ವಿಶ್ವವಿದ್ಯಾನಿಲಯ ಕುಲಸಚಿವೆ ಎಂ.ಕೆ.ಸವಿತಾ ಮಾತನಾಡಿ, ಬರಗೂರರ ಕೃತಿಗಳಲ್ಲಿ ಬ್ರಾತೃತ್ವ, ಸೌಹಾರ್ದ ಅಡಕವಾಗಿದೆ. ಇವತ್ತಿನ ಜಾಗತೀಕ ಪ್ರಪಂಚದಲ್ಲಿ ಮನುಷ್ಯ, ಸಂವೇದನೆ, ಹೋರಾಟಗಳು ದಿಕ್ಕೆಟ್ಟಿವೆ. ಅವೆಲ್ಲವನ್ನೂ ಸರಿದಾರಿಗೆ ಕೊಂಡುಯ್ಯುವ, ಬಡಿದೆಚ್ಚರಿಸುವ ಕಾರ್ಯ, ಬರಗೂರರ ಸಾಹಿತ್ಯ, ಸಿನಿಮಾಗಳಲ್ಲಿವೆ ಎಂದರು.
ಮೈಸೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಸಂಸ್ಥೆಯ ನಿರ್ದೇಶಕಿ ಪ್ರೊ.ಎನ್.ಕೆ.ಲೋಲಾಕ್ಷಿ, ದಂಡಿನ ರಾಜಪ್ಪ ಪರಿವಾರ ಪ್ರತಿಷ್ಠಾನದ ಖಜಾಂಚಿ ಲತಾ ಉಪಸ್ಥಿತರಿದ್ದರು.





