ಮೈಸೂರು: ಮೈಸೂರಿನ ಕೆ.ಜಿ.ಕೊಪ್ಪಲಿನಲ್ಲಿ ಹಸುಗಳ ಕಳ್ಳತನ ಆಗುತ್ತಿದೆ ಎಂದು ಮಾಜಿ ಶಾಸಕ ಎಲ್.ನಾಗೇಂದ್ರ ಆರೋಪ ಮಾಡಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಹರಕೆಯ ಗೂಳಿಯ ಬಾಲ ಕತ್ತರಿಸಿರುವುದು ಹೇಯ ಕೃತ್ಯ. ಈ ಮೂಲಕ ಜನರ ಭಾವನೆಗಳನ್ನು ಕತ್ತರಿಸುವ ಕೆಲಸ ಆಗುತ್ತಿದೆ ಎಂದು ಕಿಡಿಕಾರಿದರು.
ಇನ್ನು ಘಟನೆಗೆ ಸಂಬಂಧಿಸಿದಂತೆ ಪೊಲೀಸರ ವಿರುದ್ಧ ಕಿಡಿಕಾರಿದ ನಾಗೇಂದ್ರ ಅವರು, ಇಂತಹ ಘಟನೆಗಳನ್ನು ತಪ್ಪಿಸುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ಮೈಸೂರಿನ ಕೆ.ಜಿ.ಕೊಪ್ಪಲಿನಲ್ಲೇ ಹಲವು ಹಸುಗಳನ್ನು ಕಳ್ಳತನ ಮಾಡಲಾಗಿದೆ. ಅನೇಕ ಹಸುಗಳನ್ನು ಕದ್ದು, ಕೊಲ್ಲುವ ಕೆಲಸ ಮಾಡಲಾಗುತ್ತಿದೆ. ಇನ್ನು ಮುಂದಾದರೂ ಇಂತಹ ಘಟನೆಗಳು ನಡೆಯದಂತೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.