ಮೈಸೂರು: ದೇಶದೊಳಗೆ ಅಕ್ರಮವಾಗಿ ನುಸುಳುವವರ ಸಂಖ್ಯೆ ಹೆಚ್ಚಾಗಿದ್ದು, ಕರ್ನಾಟಕದಲ್ಲಿಯೂ ಬಾಂಗ್ಲಾದೇಶದ ಪ್ರಜೆಗಳು ಉದ್ಧಟತನ ತೋರುತ್ತಿದ್ದಾರೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೆ ಪತ್ರ ಬರೆದಿರುವ ಸಂಸದ ಯದುವೀರ್ ಒಡೆಯರ್ ಅವರು, ಇಂತಹ ವಿಷಯಗಳ ಕುರಿತು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸಂಸದ ಯದುವೀರ್ ಒಡೆಯರ್ ಅವರು, ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ ಬಾಂಗ್ಲಾದೇಶದ ಮೂವರು ಅಕ್ರಮ ವಲಸಿಗರು ಕೆಲವು ಹೇಳಿಕೆಗಳನ್ನು ನೀಡಿದ್ದಾರೆ. ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಇಲ್ಲಿ ಯಾವುದೇ ಭಯ ಹಾಗೂ ಆತಂಕವಿಲ್ಲ. ಅಕ್ರಮವಾಗಿ ಇಲ್ಲಿ ನೆಲಸಬಹುದು ಎಂದು ಹೇಳಿಕೊಂಡಿದ್ದಾರೆ. ಇದು ನಿಜಕ್ಕೂ ಆತಂಕಕಾರಿ ಎಂದು ಸಂಸದ ತಿಳಿಸಿದ್ದಾರೆ.
ಇದೇ ರೀತಿ ಎರಡು ವಿಡಿಯೋಗಳಿವೆ. ಎರಡೂ ವಿಡಿಯೋಗಳ ಲಿಂಕ್‌ಗಳನ್ನು ಗೃಹ ಸಚಿವರಿಗೆ ಕಳುಹಿಸಿಕೊಡಲಾಗಿದೆ. ಇನ್ನಾದರೂ ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.




