ಮೈಸೂರು: ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರ ಸ್ಥಾನಕ್ಕೆ ಭಾರೀ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಈ ಮಧ್ಯೆಯೇ ಶಾಸಕ ತನ್ವೀರ್ ಸೇಠ್ ಪ್ರತಿಕ್ರಿಯೆ ನೀಡಿ, ಕೆಪಿಸಿಸಿ ಅಧ್ಯಕ್ಷರ ಸ್ಥಾನವನ್ನು ನಿರ್ಧರಿಸುವುದು ಹೈಕಮಾಂಡ್ ವಿವೇಚನೆ ಬಿಟ್ಟಿದ್ದು ಎಂದು ಸ್ಪಷ್ಟನೆ ನೀಡಿದ್ದಾರೆ.
ಮೈಸೂರಿನಲ್ಲಿ ಇಂದು(ಜನವರಿ.15) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಪಕ್ಷದಲ್ಲಿನ ಕೆಲ ಗೊಂದಲಗಳಿಂದ ಸರ್ಕಾರಕ್ಕೆ ಡ್ಯಾಮೇಜ್ ಆಗುತ್ತಿರುವುದು ಸತ್ಯ. ಅಧಿಕಾರ ಹಂಚಿಕೆ ವಿಚಾರ, ಕೆಪಿಸಿಸಿ ಅಧ್ಯಕ್ಷರ ವಿಚಾರ ಸಚಿವ ಸಂಪುಟ ವಿಚಾರ ಈ ಮೂರು ವಿಚಾರದ ಬಗ್ಗೆ ಗೊಂದಲಗಳು ಇರುವುದು ಸತ್ಯವಾಗಿದೆ. ಈ ಗೊಂದಲಗಳನ್ನು ಕಾಂಗ್ರೆಸ್ ಹೈಕಮಾಂಡ್ ಮೊದಲು ಬಗೆಹರಿಸಬೇಕು. ಈ ವಿಚಾರಕ್ಕೆ ನನ್ನ ಸಮ್ಮತಿಯೂ ಇದೆ ಎಂದರು.
ಸಚಿವ ಸತೀಶ್ ಜಾರಕಿಹೊಳಿ ಈ ವಿಚಾರವನ್ನು ನೇರವಾಗಿ ಹೇಳುತ್ತಿದ್ದಾರೆ. ಆದರೆ ಕೆಪಿಸಿಸಿ ಅಧ್ಯಕ್ಷ ಯಾರಗಬೇಕೆಂಬುದು ಹೈಕಮಾಂಡ್ ವಿವೇಚನೆಗೆ ಬಿಟ್ಟಿರುವುದಾಗಿದೆ. ಹೈಕಮಾಂಡ್ ಅನ್ನು ಹೊರತು ಪಡಿಸಿ ಇಂತಹವರನ್ನು ಆಯ್ಕೆ ಮಾಡಿ ಅಥವಾ ಹೀಗೆ ಮಾಡಿ ಎಂದು ಸೂಚಿಸಲು ಬರುವುದಿಲ್ಲ. ಅಲ್ಲದೇ ಸತೀಶ್ ಜಾರಕಿಹೊಳಿಯವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಮಾಡುವಾಗ ಶಾಸಕರ ಅಭಿಪ್ರಾಯ ಕೇಳಿರಲಿಲ್ಲ. ಹೈಕಮಾಂಡ್ ಒಬ್ಬರನ್ನು ತೀರ್ಮಾನ ಮಾಡಿರುತ್ತದೆ ಅದನ್ನು ನಾವು ಒಪ್ಪಿಕೊಳ್ಳಬೇಕು. ಇದು ಕೂಡ ಅದೇ ರೀತಿಯಾಗಿದ್ದು, ಇದನ್ನು ಆದಷ್ಟು ಬೇಗ ಕಾಂಗ್ರೆಸ್ ಹೈಕಮಾಂಡ್ ಬಗೆಹರಿಸಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಪಕ್ಷದಿಂದ ಸರ್ಕಾರವೇ ಹೊರತು ಸರ್ಕಾರದಿಂದ ಪಕ್ಷ ಅಲ್ಲ. ಚುನಾವಣೆ ವೇಳೆ ಪಕ್ಷದಿಂದ ಸಾರ್ವಜನಿಕರಿಗೆ ಹೇಳಿರುವ ಕೆಲಸವನ್ನು ಇಂದು ನಾವು ಮಾಡಬೇಕಿದೆ. ಆದರೆ ಇಂತಹ ಗೊಂದಲಗಳು ಇದ್ದರೆ ಅದಲ್ಲೇ ಹೇಗೆ ಆಗುತ್ತದೆ ಹೇಳಿ ? ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ. ಆ ಜವಾಬ್ದಾರಿ ನಿಭಾಯಿಸುವ ಶಕ್ತಿ ನನಗೆ ಇಲ್ಲ ಎಂದು ತಿಳಿಸಿದರು.
ಇನ್ನೂ ಇದೇ ಸಂದರ್ಭದಲ್ಲಿ ಹಸುವಿನ ಕೆಚ್ಚಲು ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪಾಪ ಮೂಕ ಪ್ರಾಣಿಯ ಕೆಚ್ಚಲು ಕತ್ತರಿಸುವುದು ತಪ್ಪು. ಇದು ಹೆತ್ತ ತಾಯಿಗೆ ದ್ರೋಹ ಮಾಡಿದಂತೆ ಆಗಿರುವ ಪ್ರಕರಣವಾಗಿದೆ. ಹಾಗಾಗಿ ತಪ್ಪಿತಸ್ಥನಿಗೆ ಕಠಿಣವಾದ ಶಿಕ್ಷೆಯಾಗಬೇಕು ಎಂದರು.
ಹಸುಗಳ ಕೆಚ್ಚಲು ಕೊಯ್ದಿರುವ ಆತನನ್ನು ಹೀಗಾಗಲೇ ಬಂಧಿಸಲಾಗಿದೆ. ಆತನಿಗೆ ಕಠಿಣ ಕಾನೂನು ಶಿಕ್ಷೆಯಾಗಬೇಕು. ನಾನು ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಆದರೆ
ಬಿಜೆಪಿಯವರು ಹಸುವಿನ ಸಾವಿನಲ್ಲಿ ರಾಜಕಾರಣ ಮಾಡುವುದು ಸರಿಯಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.





